ದಾವಣಗೆರೆ : ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುಸುಕಿನಜೋಳ ಬೆಳೆಯುವ ಜಿಲ್ಲೆಗಳಲ್ಲಿ ಮೊದಲ ಸ್ಥಾನವನ್ನು ದಾವಣಗೆರೆ ದಕ್ಕಿಸಿಕೊಂಡಿದ್ದು, ಇದೀಗ ಪ್ರಥಮ ಸ್ಥಾನವನ್ನು ಅಲಂಕರಿಸಲು ಕುಂದಾನಗರಿ ಬೆಳಗಾವಿ ಜಿಲ್ಲೆಯು ಬೆಣ್ಣೆನಗರಿಗೆ ಪೈಪೋಟಿ ಒಡ್ಡುತ್ತಿದೆ. ಹಾಗೆಯೇ, ರಾಷ್ಟ್ರ ಮಟ್ಟದಲ್ಲೂ ಕರ್ನಾಟಕಕ್ಕೆ ನೆರೆಯ ರಾಜ್ಯ ಮಹಾರಾಷ್ಟ್ರ ಪೈಪೋಟಿ ನೀಡುತ್ತಿದೆ.
ಹೌದು, ಭಾರತ ದೇಶದಲ್ಲಿ 81.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 2.12 ಕೋಟಿ ಟನ್ ಮುಸುಕಿನಜೋಳವನ್ನು ರೈತರು ಬೆಳೆಯುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 20 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುತಿದ್ದು, 39.6 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ದಾವಣಗೆರೆ ಹೊರತು ಪಡಿಸಿ ಬಳ್ಳಾರಿ, ಬಾಗಲಕೋಟೆ, ಚಿತ್ರದುರ್ಗ, ಧಾರವಾಡ, ಹಾವೇರಿ, ಚಾಮರಾಜನಗರ, ಶಿವಮೊಗ್ಗ, ಹಾಸನ ಜಿಲ್ಲೆಗಳು ಸೇರಿ ಒಟ್ಟಾರೆ ರಾಜ್ಯದ ಶೇ.40 ರಷ್ಟು ಕೃಷಿ ಭೂಮಿಯಲ್ಲಿ ಮುಸುಕಿನಜೋಳ ಬೆಳೆಯಲಾಗುತ್ತಿದೆ. ಮಳೆ ಆಶ್ರಿತ ಬೆಳೆಯಾಗಿರುವ ಕಾರಣ ರಾಜ್ಯದ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬಿತ್ತನೆಯಾಗುತ್ತದೆ.
ಇದನ್ನೂ ಓದಿ : ದಾವಣಗೆರೆ ಮೆಕ್ಕೆಜೋಳ ರೈತರಿಗೆ ಗಿಳಿಗಳೇ ಸವಾಲು : ನೆರವಿಗೆ ಸರ್ಕಾರದ ಮೊರೆ
ಕರ್ನಾಟಕದ ಕೇಂದ್ರ ಭಾಗ ದಾವಣಗೆರೆ ಮುಸುಕಿನಜೋಳ ಬೆಳೆಯಲು ಹೇಳಿ ಮಾಡಿಸಿದ ಜಿಲ್ಲೆಯಾಗಿದೆ. ಮೆಕ್ಕೆಜೋಳ ಬೆಳೆಯಲು ಹೆಚ್ಚು ಮಳೆಯ ಅಗತ್ಯವಿಲ್ಲ. ಅದ್ರೆ, ಅತಿಯಾದ ಬಿಸಿಲನ್ನೂ ಸಹ ಈ ಬೆಳೆ ಸಹಿಸಿಕೊಳ್ಳುವುದಿಲ್ಲ. ಹೀಗಾಗಿ, ಬಿಸಿಲು - ಮಳೆ ಎರಡೂ ವಿಷಯದಲ್ಲೂ ಸಮತೋಲನ ಹೊಂದಿರುವ ಪ್ರದೇಶ ಅಗತ್ಯ. ಕೃಷಿ ವಲಯದಲ್ಲಿ ಈ ಭಾಗವನ್ನು "ಕೇಂದ್ರ ಒಣ ವಲಯ" ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಕೆಂಪು ಮತ್ತು ಕಪ್ಪು ಎರಡೂ ರೀತಿಯ ಮಣ್ಣು ಕಂಡು ಬರುತ್ತದೆ. ಇದುವೇ ಮೆಕ್ಕೆಜೋಳ ಬೆಳೆಗೆ ಭೀಮ ಬಲ. ಪೂರ್ಣ ಕಪ್ಪು ಅಲ್ಲದ, ಪೂರ್ಣ ಕೆಂಪೂ ಅಲ್ಲದ ಮಸಾರೆ ಮಣ್ಣು ಅತಿ ಹೆಚ್ಚು ಫಲವತ್ತತೆ ಹೊಂದಿದೆ. ಅಲ್ಲದೆ, ಈ ಮಣ್ಣನಲ್ಲಿ ಮೆಕ್ಕೆಜೋಳ ಬೆಳೆದರೆ ಹೆಚ್ಚು ಇಳುವರಿ ನಿರೀಕ್ಷಿಸಬಹುದು ಎನ್ನುತ್ತಾರೆ ರೈತರು.
ಮೆಕ್ಕೆಜೋಳದ ಕಣಜ ದಾವಣಗೆರೆ : ಮೆಕ್ಕೆಜೋಳ ಉತ್ಪಾದನೆಗೆ ಭಾರತ ಹೆಚ್ಚು ಮಹತ್ವ ನೀಡುತ್ತಲೇ ಬಂದಿದೆ. ದುರಂತ ಅಂದ್ರೆ, ಅಮೆರಿಕ ಸೇರಿದಂತೆ ಮತ್ತಿತರೆ ದೇಶಗಳಿಗೆ ಹೋಲಿಸಿದರೆ ಇಳುವರಿ ವಿಚಾರದಲ್ಲಿ ನಮ್ಮ ದೇಶ ತುಂಬಾ ಹಿಂದೆ ಉಳಿದಿದೆ. ಕರ್ನಾಟಕದ ಮೆಕ್ಕೆಜೋಳದ ಕಣಜವಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಎಕರೆಗೆ 20 ರಿಂದ 25 ಕ್ವಿಂಟಾಲ್ ಇಳುವರಿ ಬಂದರೆ ಹೆಚ್ಚು.
ಜಾಗತಿಕ ಸರಾಸರಿ ಇಳುವರಿ ಕೂಡ 22 ಕ್ವಿಂಟಾಲ್ ಇದೆ. ಆದರೆ, ಅಮೆರಿಕದ ರೈತರು ಪ್ರತಿ ಎಕರೆಗೆ ಸರಾಸರಿ 42 ಕ್ವಿಂಟಲ್ ಇಳುವರಿ ತೆಗೆಯುತ್ತಾರೆ. ಈ ನಿಟ್ಟಿನಲ್ಲಿ ಭಾರತ ಮತ್ತು ಕರ್ನಾಟಕದ ಮೆಕ್ಕೆಜೋಳ ಕೃಷಿಯಲ್ಲಿ ಆಧುನಿಕತೆ, ವೈಜ್ಞಾನಿಕತೆ ಹೆಚ್ಚು ಹಾಸುಹೊಕ್ಕಾಗಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇದನ್ನೂ ಓದಿ : ಮೆಕ್ಕೆಜೋಳ ಬೆಳೆದ ರೈತನ ಕಣ್ಣಲ್ಲಿ ನೀರು: ಮಳೆಯಲ್ಲಿ ನೆನೆದು ಮೊಳಕೆ ಬಂದ ಬೆಳೆ