ದಾವಣಗೆರೆ: ಆ ಶಾಲೆ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿದೆ. ಶಾಲೆಯಲ್ಲಿ ವ್ಯಾಸಂಗ ಮಾಡಿದವರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದವರಿದ್ದಾರೆ. ಇದಲ್ಲದೇ ಅದೇ ವಿದ್ಯಾ ದೇಗುಲದಲ್ಲಿ ದಿವಂಗತ ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಅವರು ಓದಿದ ಶಾಲೆ ಕೂಡ ಹೌದು. ಆದರೆ ಅ ಶಾಲೆ ಇದೀಗ ಅವನಿಯತ್ತ ಸಾಗಿದೆ. ಶತಮಾನ ಪೂರೈಸಿದ ಹಳೇ ಶಾಲೆ ಇಂದು ಪಾಳುಕೊಂಪೆಯಾಗಿದ್ದು, ಸೂಕ್ತ ವ್ಯವಸ್ಥೆ ಇಲ್ಲದೇ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ದಾವಣಗೆರೆ ನಗರದ ಕೆ.ಆರ್.ಮಾರ್ಕೆಟ್ನ ಹೃದಯಭಾಗದಲ್ಲಿರುವ ಸರ್ಕಾರಿ ಶಾಲೆ ಈಗಲೋ, ಆಗಲೋ ಬೀಳೋ ಹಂತವನ್ನು ತಲುಪಿದೆ. ಈ ವಿದ್ಯಾದೇಗುಲ 1900 ರಲ್ಲಿ ನಿರ್ಮಾಣ ಆಗಿ ಸಾಕಷ್ಟು ಪ್ರತಿಭಾವಂತರಿಗೆ ವಿದ್ಯಾದಾನ ಮಾಡಿದೆ. ಏಕೀಕೃತ ರಾಜ್ಯದ ಮೊದಲ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪನಂತಹ ಮಹಾನ್ ನಾಯಕ ಓದಿದ್ದು ಇದೇ ಶಾಲೆಯಲ್ಲಿ. ಇದಲ್ಲದೇ ಈ ಬಹಳ ಹಳೇಯ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಗಳು ಪ್ರಧಾನಿ ಕಾರ್ಯಾಲಯ ಸೇರಿದಂತೆ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ದಶಕ ಪೂರೈಸಿದ ಶಾಲೆಗೆ ಕಾಯಕಲ್ಪ ಬೇಕಾಗಿದ್ದು, ಅಭಿವೃದ್ಧಿ ಪಡಿಸುವಲ್ಲಿ ರಾಜ್ಯ ಸರ್ಕಾರ, ದಾವಣಗೆರೆ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಾಲೆಯಲ್ಲಿ ಓದಿದ ಹಳೇಯ ವಿದ್ಯಾರ್ಥಿಗಳ ಆರೋಪ ಮಾಡಿದ್ದಾರೆ. ಬೀಳುವ ಹಂತ ತಲುಪಿರುವ ಅತ್ಯಂತ ಹಳೇಯ ಈ ಶಾಲೆಯ ದುಃಸ್ಥಿತಿಯನ್ನು ಕಂಡು ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ಒಂದು ಕಾಲದಲ್ಲಿ ನೂರಾರು ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದರು. ಆದರೆ, ಈ ವರ್ಷ ಕೇವಲ 50 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ.
ಹಳೆ ವಿದ್ಯಾರ್ಥಿಗಳ ಮನವಿ: ಇದೇ ವೇಳೆ ಪ್ರತಿಕ್ರಿಯಿಸಿದ ಶಾಲೆಯ ಹಳೇ ವಿದ್ಯಾರ್ಥಿ ಶಾಂತಕುಮಾರ್, ಈ ಶಾಲೆಯಲ್ಲಿ ದಿವಂಗತ ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಅವರು ವ್ಯಾಸಂಗ ಮಾಡಿದ್ದಾರೆ. ಅದಲ್ಲದೇ ಇಲ್ಲಿ ವ್ಯಾಸಂಗ ಮಾಡಿದ ಸಾಕಷ್ಟು ಜನ ದೇಶ ವಿದೇಶದ ದೊಡ್ಡ ಹುದ್ದೆಯಲ್ಲಿ ಕೆಲಸ ನಿರ್ವಹಸುತ್ತಿದ್ದಾರೆ. ಆದರೆ, ಶಾಲೆಯ ಸ್ಥಿತಿ ಶೋಚನೀಯವಾಗಿದೆ. ಮಕ್ಕಳ ದಾಖಲಾತಿಯಲ್ಲಿ ಕುಸಿತ ಕಂಡಿದೆ. ಹೀಗೆ ಮುಂದುವರಿದರೆ ಶಾಲೆ ಖಾಯಂ ಆಗಿ ಬಾಗಿಲು ಹಾಕಬೇಕಾಗತ್ತೆ. ತಕ್ಷಣ ಈ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಅಲ್ಲದೇ ಸುತ್ತಮುತ್ತ ವ್ಯಾಪಾರ ಮಾಡುವರು ಮತ್ತು ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಶಾಲೆಯ ಆವರಣವನ್ನು ಪಾರ್ಕಿಂಗ್ ಪ್ರದೇಶದ ರೀತಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಶಾಲೆಯ ಸುತ್ತಲಿನ ವಾತಾವರಣ ಹಾಳಾಗಿದೆ. ರಾತ್ರಿ ವೇಳೆ ಕುಡುಕರು ಮತ್ತು ಮಾದಕ ವಸ್ತು ಸೇವಕರ ಕಾಟವೂ ಇದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಮತ್ತೋರ್ವ ಹಳೇಯ ವಿದ್ಯಾರ್ಥಿ ಬಸವರಾಜ್, ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಕಾಮಗಾರಿಗೆ ಬಂದ ಕಚ್ಚಾ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿತ್ತು. ಮಕ್ಕಳಿಗೆ ಆಟದ ಮೈದಾನದ ಕೊರತೆ ಇತ್ತು. ಶಾಲೆಯ ಛಾವಣಿ, ಗೋಡೆಗಳು ಬಿರುಕು ಬಿಟ್ಟಿದ್ದು ಇಂದೋ ನಾಳೆಯೋ ಎಂಬಂತಿದೆ. ವಿದ್ಯಾರ್ಥಿಗಳು ಪ್ರಾಣ ಭಯದಲ್ಲೇ ಓದಲು ಬರುತ್ತಿದ್ದಾರೆ. ನಗರದಲ್ಲಿದ್ದರೂ ಅಭಿವೃದ್ಧಿ ಕಾಣದೇ ಅವನತಿಯ ಹಂತಕ್ಕೆ ಶಾಲೆ ತಲುಪಿದೆ ಎಂದರು.
ಶಾಲೆಯ ಕೊಠಡಿಗಳು ಸಂಪೂರ್ಣ ದುರಸ್ತಿಗೊಂಡಿವೇ, ಮೇಲ್ಛಾವಣಿ ಹೆಂಚುಗಳು ಉದುರಿ ಬೀಳುತ್ತವೆ, ಕೊಠಡಿ ಗೋಡೆಗಳು ಈಗಾಗಲೇ ಬಿದ್ದು ಹೋಗಿದ್ದು ಅಲ್ಲಿ ಆಗಾಗ ನಾಯಿ, ಹಂದಿ, ಹಾವು ಬರುತ್ತವಂತೆ. ಇನ್ನು ಶಾಲೆಯ ಹೆಂಚು, ಕಿಟಕಿ ಬಾಗಿಲು ಸರಳು ಸೇರಿ ವಿವಿಧ ವಸ್ತುಗಳು ಕಳ್ಳತನ ವಾಗಿದೆ. ಕಳ್ಳತನ ಕುರಿತು ದೂರು ನೀಡಿದರು ಪೊಲೀಸ್ ಮಾತ್ರ ಸಿಸಿ ಕ್ಯಾಮೆರಾ ಹಾಕಿ, ವಾಚ್ ಮ್ಯಾನ್ ನೇಮಿಸಿ ಅಂತ ಬಿಟ್ಟಿ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಚ್ಛೇದನ ಬಳಿಕ 8 ವರ್ಷ ನೋಡಲು ಬಾರದ ತಂದೆ: ಮಗುವಿನೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಲು ತಾಯಿಗೆ ಅನುಮತಿಸಿದ ಹೈಕೋರ್ಟ್