ದಾವಣಗೆರೆ: ಭದ್ರಾ ನದಿ ನಾಲ್ಕೈದು ಜಿಲ್ಲೆಗಳ ಜೀವನಾಡಿ. ಆ ನದಿ ನೀರಿಗಾಗಿ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ವರ್ಷಗಳ ಹೋರಾಟವೇ ನಡೆದಿತ್ತು. ಇದೀಗ ಚಿತ್ರದುರ್ಗ - ದಾವಣಗೆರೆ ಜಿಲ್ಲೆ ನಡುವೆ ಹೋರಾಟ ಆರಂಭವಾಗಿದೆ. ಸರ್ಕಾರ ಚಿತ್ರದುರ್ಗದ ಹಿರಿಯೂರಿನ ವಿವಿ ಸಾಗರಕ್ಕೆ ನೀರು ಹರಿಸಿದ್ದು, ದಾವಣಗೆರೆ ಜಿಲ್ಲೆಯ ರೈತರನ್ನು ಕೆರಳಿಸಿದೆ. ಈ ಹಿನ್ನೆಲೆ, ಎರಡು ಜಿಲ್ಲೆಯ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ನೆರೆಯ ಜಿಲ್ಲೆ ಚಿತ್ರದುರ್ಗಕ್ಕೆ ಬರಲು ಸಾಕಷ್ಟು ಹೋರಾಟಗಳೇ ನಡೆದಿವೆ. ಈ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆಗೆ ಕೆಲ ದಿನಗಳಿಂದ ಭದ್ರಾದಿಂದ ನೀರು ಹರಿಸುತ್ತಿದ್ದು, ಶಿವಮೊಗ್ಗ ಹಾಗೂ ದಾವಣಗೆರೆಯ ರೈತರನ್ನು ಕೆರಳಿಸಿದೆ. ಅದರಲ್ಲೂ ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿ ಹೋರಾಟಕ್ಕೆ ಸಜ್ಜಾಗಿದೆ.
ಭದ್ರಾ ಜಲಾಶಯದಲ್ಲಿನ ನೀರಿನ ಪ್ರಮಾಣ:
ಪ್ರಸ್ತುತ ಭದ್ರಾ ಜಲಾಶಯದಲ್ಲಿ ಈಗ 155.9 ಅಡಿ ನೀರು ಸಂಗ್ರಹವಾಗಿದ್ದು, 39.086 ಟಿಎಂಸಿ ನೀರು ಇದೆ. ಇದರಲ್ಲಿ ಡೆಡ್ ಸ್ಟೋರೇಜ್ 13.832 ಟಿಎಂಸಿ ಮತ್ತು ಬೇಸಿಗೆಯಲ್ಲಿ ಕುಡಿಯುವುದಕ್ಕೆ 7 ಟಿಎಂಸಿ ನೀರು ಮೀಸಲಿರಲಿದೆ. ಇದನ್ನು ಬಿಟ್ಟರೆ 18.254 ಟಿಎಂಸಿ ನೀರು ಉಳಿಯಲಿದ್ದು, ಭದ್ರಾ ಮೇಲ್ದಂಡೆಗೆ 12.5 ಟಿಎಂಸಿ ನೀರು ಕೊಟ್ಟರೆ ಇನ್ನೂ 8.332 ಟಿಎಂಸಿ ನೀರು ಮಾತ್ರ ಉಳಿಯಲಿದೆ. ಇದು 52 ದಿನಗಳಲ್ಲಿ ಖಾಲಿಯಾಗಲಿದೆ.
ಇದನ್ನೂ ಓದಿ: ಪಕ್ಷದಲ್ಲಿ ಸಿಎಂ ಬದಲಾವಣೆ ವಿಚಾರವೇ ಇಲ್ಲ: ಮಾಜಿ ಶಾಸಕ ಎ.ಮಂಜು
ಅಲ್ಲದೇ ಭದ್ರಾ ಮೇಲ್ದಂಡೆಗೆ ಜುಲೈ 7ರಿಂದ ಅಕ್ಟೋಬರ್ 15ರವರೆಗೆ ನೀರು ಹರಿಸಲು ಸೂಚಿಸಲಾಗಿದೆ. ನೀರಾವರಿ ಇಲಾಖೆಯ ಸಲಹಾ ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳದೇ ಸರ್ಕಾರ ಏಕಾಏಕಿ ನೀರು ಹರಿಸುವುದಕ್ಕೆ ಹೇಳಿರುವುದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಸೃಷ್ಟಿಸಿದೆ.
ಮೊದಲು ತುಂಗಾ ನದಿಯಿಂದ 17.04 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಬಿಡಬೇಕು. ಆಗ ಮಾತ್ರ ಭದ್ರಾ ಮೇಲ್ದಂಡೆಗೆ ನೀರು ಹರಿಸಬಹುದಾಗಿದೆ. ಆದರೆ ತುಂಗಾದಿಂದ ಭದ್ರಾಗೆ ನೀರು ಹರಿಸುವ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದ್ದು, ಅ ಕಾಮಗಾರಿ ಪೂರ್ಣಗೊಂಡ ನಂತರ ಭದ್ರಾ ಮೇಲ್ದಂಡೆಗೆ ನೀರು ಹರಿಸಬೇಕು ಎಂದು ಸಂಸದ ಜಿಎಂ ಸಿದ್ದೇಶ್ವರ್ ಸಿಎಂಗೆ ಪತ್ರ ಬರೆಯಲು ಮುಂದಾಗಿದ್ದಾರೆ.