ದಾವಣಗೆರೆ: ಇಲ್ಲಿನ ಬಡ ವರ್ಗದ ಕುಟುಂಬಗಳು ಜಿಲ್ಲಾಡಳಿತಕ್ಕೆ ಸೇರಿದ ಹಳ್ಳದ ಖರಾಬು ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಈ ಸ್ಥಳ ನಮಗೆ ಸೇರಿದ್ದು ಎನ್ನುತ್ತಿದೆ. ಇದು ಜಿಲ್ಲಾಡಳಿತಕ್ಕೆ ತಲೆಬಿಸಿ ತಂದಿದೆ.
2007ರಿಂದ ನಗರದ ಹೊರವಲಯದ ಆವರಗೆರೆ ಬಳಿ ಇರುವ ದನುವಿನ ಓಣಿಯ ಹಳ್ಳದ ಖರಾಬು ಜಮೀನಿನಲ್ಲಿ 200 ಕ್ಕೂ ಹೆಚ್ಚು ದಲಿತ ಮುಸ್ಲಿಂ ಬಡ ಕುಟುಂಬಗಳು ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿವೆ. ಇದರಿಂದ ಅಕ್ಕಪಕ್ಕದ ಜಮೀನಿನ ಮಾಲೀಕರಿಗೆ ಕಿರಿಕಿರಿಯಾಗಿದ್ದರಿಂದ ಎರಡು ಬಾರಿ ಬೆಂಕಿ ಇಟ್ಟು ಗುಡಿಸಲುಗಳನ್ನು ಸುಟ್ಟು ಹಾಕಿದ್ದರಂತೆ. ಅದರೂ ಪಟ್ಟುಬಿಡದ ಬಡ ದಲಿತ ಹಾಗೂ ಮುಸ್ಲಿಂ ಕುಟುಂಬಗಳು ಇದೀಗ ಮತ್ತೇ ಹಳ್ಳದ ಖರಾಬು ಜಮೀನಿನಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ.
ಆದರೆ, ಇದು ಹಳ್ಳದ ಖರಾಬು ಜಮೀನು, ಬಡ ಕುಟುಂಗಳಿಗೆ ಕೊಡಲು ಬರಲ್ಲ ಎಂಬ ವಾದದೊಂದಿಗೆ ಜಿಲ್ಲಾಡಳಿತ ತೆರವು ಕಾರ್ಯಚರಣೆಗೆ ಇಳಿದಿದ್ದು, ಎಷ್ಟೇ ಪ್ರಯತ್ನ ಪಟ್ಟರೂ ಕುಟುಂಬಗಳನ್ನು ತೆರವು ಮಾಡಲು ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ಎಸಿ ಮಮತಾ ಹೊಸಗೌಡರ್ ಹಾಗೂ ತಹಶೀಲ್ದಾರ್ ಗಿರೀಶ್ ಸೇರಿದಂತೆ ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿಯವರು ಸೇರಿ ಮನವೊಲಿಸುವ ಪ್ರಯತ್ನಿಸಿದರೂ ಕುಟುಂಗಳು ತೆರವಿಗೆ ಅವಕಾಶ ಕೊಟ್ಟಿಲ್ಲ. ಇದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
1947 ರಿಂದ ದಾಖಲೆಗಳಲ್ಲಿ ದನುವಿಓಣಿ ಎಂದು ಉಲ್ಲೇಖ ಇರುವ ಒಂದೂವರೆ ಎಕರೆ ಹಳ್ಳದ ಖರಾಬು ಜಮೀನು ನಮಗೆ ನೀಡಿ ಎಂದು ದಲಿತರು ಬೀದಿಗಿಳಿದಿದ್ದಾರೆ. ಇತ್ತ ಜಿಲ್ಲಾಡಳಿತ ಇದು ಹಳ್ಳದ ಖರಾಬು ಜಮೀನು ನಿಮಗೆ ನೀಡಲು ಬರುವುದಿಲ್ಲ ಎಂದು ವಾದ ಮಾಡುತ್ತಿದೆ. ಇನ್ನು ಆವರಗೆರೆ ಅಂದು ಗ್ರಾಮ ಇರುವ ಸಂದರ್ಭದಲ್ಲಿ ಎಸ್ಎಸ್ ಆಸ್ಪತ್ರೆ ನಿರ್ಮಾಣ ಮಾಡಿದ್ದರಿಂದ ಇಲ್ಲಿ ಇದ್ದ ಹಳ್ಳವನ್ನು ಕೆರೆಗೆ ಜೋಡಿಸಲಾಗಿದೆಯಂತೆ. ಹಳ್ಳ ಹರಿಯದೆ ಇರುವುದರಿಂದ ಖಾಲಿ ಜಮೀನು ನಮಗೆ ನೀಡಿ ಎಂದು ಬಡ ಕುಟುಂಬಗಳು ಪಟ್ಟು ಹಿಡಿದಿವೆ.
ಇದನ್ನೂ ಓದಿ: ಹಿಜಾಬ್ ಪ್ರಕರಣ: ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಬಗ್ಗೆ ಹೈಕೋರ್ಟ್ ಹೇಳಿದ್ದೇನು?