ದಾವಣಗೆರೆ: ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗದ ಅಧಿಕಾರಿ ಹಾಗೂ ಸಿಬ್ಬಂದಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾತೇಂಶ್ ಬೀಳಗಿ ಎಚ್ಚರಿಕೆಯ ನೋಟಿಸ್ ಜಾರಿ ಮಾಡಲು ಸೂಚಿದರು.
ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಅಧಿಕಾರಿಗಳು ಇದ್ದ ಕಚೇರಿಗೆ ತಾವೇ ಖುದ್ದಾಗಿ ತೆರಳಿ ಹಾಜರಿ ಗಮನಿಸಿದರು. ನಿಗದಿತ ವೇಳೆಗೆ ಕಚೇರಿಗೆ ಬಾರದಿದ್ದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು.
ಈ ರೀತಿ ಅಧಿಕಾರಿಗಳು ಮತ್ತೆ ಸಮಯಕ್ಕೆ ಸರಿಯಾಗಿ ಹಾಜರಾಗದೆ ಇದ್ದರೆ ಇಂತಹ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವೇತನ ತಡೆ ಹಿಡಿಯಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇನ್ನು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಿಗಿ, ನಾನು ಇರುವಷ್ಟು ದಿವಸ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸಮಯಪ್ರಜ್ಞೆ ಮೂಡಿಸುತ್ತೇನೆ. ಹಲವೆಡೆ ಅಧಿಕಾರಿಗಳು ತುಂಬಾ ತಡವಾಗಿ ಬರೋದು, ಸಂಜೆ ಬೇಗ ಹೋಗೋದು ಗಮನಕ್ಕೆ ಬಂದಿದೆ. ಇದನ್ನು ನಿಲ್ಲಿಸಬೇಕು ಅಂತಲೇ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದೆ. ತಡವಾಗಿ ಬಂದ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅವರು ನೀಡುವ ಕಾರಣ ನೋಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.