ದಾವಣಗೆರೆ: ದಲಿತರು ಅಂದ್ರೆ ಅಸ್ಪೃಶ್ಯರು, ತುಳಿತಕ್ಕೊಳಗಾದವರು ಅನ್ನೋ ಮಾತಿದೆ. ದೇವಸ್ಥಾನ ಹೊರಗೆ ನಿಲ್ಲಿಸುವ ಸನ್ನಿವೇಶಗಳು ಕಾಣಸಿಗುತ್ತವೆ. ಆದ್ರೆ ಇಲ್ಲಿ ದಲಿತರೇ ದೇವರು. ಅವರ ಪಾದ ಸ್ಪರ್ಶಕ್ಕಾಗಿ ಸಾವಿರಾರು ಭಕ್ತರು ನೆಲದ ಮೇಲಿನ ಹಾಸಿಗೆ ಆಗ್ತಾರೆ. ಆತನ ಪಾದ ತಮ್ಮ ಮೇಲೆ ಬೀಳಲಿ ಎಂದು ಭಕ್ತರು ಕಾತುರದಿಂದ ಕಾಯುತ್ತಿರುತ್ತಾರೆ.
ಹೌದು, ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅರಸೀಕೆರೆ ಗ್ರಾಮದಲ್ಲಿ ಇಂತಹ ವಿಶಿಷ್ಟ ಆಚರಣೆ ನಡೆಯುತ್ತಿದೆ. ಅರಸೀಕೆರೆ ಗ್ರಾಮದ ಶಕ್ತಿ ದೇವತೆ ದಂಡಿ ದುಗ್ಗಮ್ಮ ದೇವಿಯ ಕಾರ್ತಿಕೋತ್ಸವದ ಅಂಗವಾಗಿ ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ದಲಿತ ಪೂಜಾರಿಗಳು ಹೀಗೆ ಭಕ್ತರ ಬೆನ್ನಮೇಲೆ ನಡೆಯೋ ಪದ್ಧತಿ ಜಾರಿಯಲ್ಲಿದೆ.
ದಲಿತ ಪೂಜಾರಿಗಳಿಗೆ ದೇವರ ಸ್ಥಾನ :
ಇಲ್ಲಿ ದಲಿತ ಪೂಜಾರಿಗಳಿಗೆ ದೇವರ ಸ್ಥಾನ ನೀಡಲಾಗಿದ್ದು, ದೇವರ ಪಾದ ನೆಲಕ್ಕೆ ಸ್ಪರ್ಶ ಆಗಬಾರದು ಅಂತ ಜಾತ್ರೆ ಬಂದ ಸಾವಿರಾರು ಭಕ್ತರು ತಮ್ಮ ಬೆನ್ನನ್ನೇ ಹಾಸಿಗೆ ಮಾಡಿಕೊಳ್ಳುತ್ತಾರೆ. ಹೀಗೆ ಪೂಜಾರಿ ತಮ್ಮ ಬೆನ್ನಮೇಲೆ ನಡೆದರೆ ಒಳಿತಾಗುತ್ತೆ ಅನ್ನೋದು ಭಕ್ತರ ನಂಬಿಕೆ.
ದಲಿತ ಪೂಜಾರಿಗಳು ಸುಮಾರು ಎರಡು ಕಿಲೋಮೀಟರ್ ದೂರ ಮಗಲಗಿಕೊಳ್ಳುವ ಭಕ್ತರ ಬೆನ್ನಮೇಲೆ ನಡೆದುಕೊಂಡು ದೇವಸ್ಥಾನಕ್ಕೆ ಹೋಗ್ತಾರೆ. ಅಲ್ಲದೇ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗಿರುವವರು ಸಹ ಕೆರೆಯಲ್ಲಿ ಪೂಜೆ ಸಲ್ಲಿಸಿ ಸ್ನಾನ ಮಾಡಿ ದೀಡು ನಮಸ್ಕಾರ ಮಾಡಿಕೊಂಡು ದೇವಸ್ಥಾನದ ವರೆಗೂ ಹೋಗುವುದು ಇಲ್ಲಿನ ಭಕ್ತರ ಪ್ರತೀತಿ.
'ನಾವೆಲ್ಲರೂ ಒಂದೇ ತಾಯಿ ಮಕ್ಕಳು'
ದಲಿತ ವ್ಯಕ್ತಿಯೊಬ್ಬ ದೇವತೆಗೆ ಪೂಜಿ ಸಲ್ಲಿಸಿ, ಅ ದೇವರನ್ನು ತಲೆ ಮೇಲೆ ಹೊತ್ತುಕೊಂಡು ಜನರ ಮೇಲೆ ನಡೆದಾಡಿದ್ರೆ ಒಳಿತಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ನಾವೆಲ್ಲರೂ ಒಂದೇ ತಾಯಿ ಮಕ್ಕಳು, ನಮ್ಮಲ್ಲಿ ಯಾವುದೇ ಬೇಧಭಾವ ಇಲ್ಲ ಅನ್ನೋದಕ್ಕೆ ಈ ಆಚರಣೆಯೇ ಸಾಕ್ಷಿಯಾಗಿದೆ. ಅದರಲ್ಲೂ ಜಾನುವಾರಗಳಿಗೆ ಏನಾದ್ರು ರೋಗ ರುಜಿನೆಗಳು ಬಂದ್ರಿದ್ರೆ ತಾಯಿ ಗುಣಪಡಿಸುತ್ತಾಳೆ ಎನ್ನುವ ನಂಬಿಕೆ. ಹಾಗೆ ಜಾತ್ರೆಯ ದಿನದಂದು ದೇವಸ್ಥಾನದ ಮುಂಭಾಗ ಪ್ರದಕ್ಷಿಣೆ ಹಾಕಿದರೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ ಭಕ್ತರು. ಇಡೀ ರಾಜ್ಯದಲ್ಲಿ ದಂಡಿ ದುಗ್ಗಮ್ಮ ದೇವಿಗೆ ಮಾತ್ರ ದಲಿತ ಪೂಜಾರಿ ಇರೋದು ಇಲ್ಲಿನ ವಿಶೇಷ.