ದಾವಣಗೆರೆ : ರಾಜ್ಯದಲ್ಲಿ ಬೇಡ ಜಂಗಮ ಸಮುದಾಯದವರು ಪರಿಶಿಷ್ಟ ಪಂಗಡದಲ್ಲಿ ಬರುತ್ತಿದ್ದು, ಅವರು ಎಸ್ಸಿ ಸರ್ಟಿಫಿಕೇಟ್ ಪಡೆದಿದ್ದಾರೆ ಎಂಬ ವಿವಾದ ತರಾಕಕ್ಕೇರಿದೆ. ಶಾಸಕ ರೇಣುಕಾಚಾರ್ಯ ಪುತ್ರಿ ಸಹ ಈ ಸರ್ಟಿಫಿಕೇಟ್ ಪಡೆದು ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದೆ. ಈ ಸೌಲಭ್ಯ ಪಡೆದು ವಿವಾದಕ್ಕೆ ಕಾರಣರಾಗಿರುವ ರೇಣುಕಾಚಾರ್ಯ ಸಹೋದರ ದ್ವಾರಕೇಶ್ವರಯ್ಯನವರ ವಿರುದ್ಧ ದಲಿತ ಪರ ಸಂಘಟನೆಗಳು ಮುಗಿಬಿದ್ದಿವೆ.
ಶಾಸಕ ರೇಣುಕಾಚಾರ್ಯ ಅವರ ಹಿರಿಯ ಸಹೋದರ ದ್ವಾರಕೇಶ್ವರಯ್ಯನವರ ಇಡೀ ಕುಟುಂಬ ಕೋಟ್ಯಂತರ ಆಸ್ತಿ ಇದ್ರೂ ಕೂಡ ಎಸ್ಸಿ ಸರ್ಟಿಫಿಕೇಟ್ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಇಂದು ದಾವಣಗೆರೆಯಲ್ಲಿ ದಲಿತ ಪರ ಸಂಘಟನೆಗಳು ದ್ವಾರಕೇಶ್ವರಯ್ಯ ಮೇಲೆ ಮುಗಿಬಿದ್ದಿವೆ.
ಇನ್ನು ಕೆ ಎಸ್ ಸಿಂಗ್ ಹಾಗೂ ಸೂರ್ಯನಾಥ್ ಕಾಮಥ್ ಅವರ ವರದಿಗಳಲ್ಲಿ ವೀರಶೈವ ಲಿಂಗಾಯತರೇ ಬೇಡ ಜಂಗಮ ಎಂದು ಹೇಳಿದೆ. 1950ರಲ್ಲಿ ಫಸ್ಟ್ ಶೆಡ್ಯುಲ್ ಕ್ಯಾಸ್ಟ್ ಕಾನ್ಸ್ಟಿಟ್ಯೂಷನ್ ಆರ್ಡರ್‌ನಲ್ಲಿ ಕುಲಕಸುಬು ಆಧಾರದ ಮೇಲೆ ಬೇಡ ಹಾಗೂ ಬುಡ್ಗ ಜಂಗಮ ಎಂದು ಮಾಡಿದ್ದಾರೆಂದು ದ್ವಾರಕೇಶ್ವರಯ್ಯ ಈ ವೇಳೆ ದಲಿತರ ಜೊತೆ ವಾಗ್ವಾದಕ್ಕಿಳಿದಿದ್ದರು.
ಇದನ್ನೂ ಓದಿ: 3 ವರ್ಷದಿಂದ ಕೂಡಿಟ್ಟ 1 ರೂ.ನಾಣ್ಯಗಳನ್ನೇ ನೀಡಿ ₹2.6 ಲಕ್ಷ ಮೌಲ್ಯದ ಬೈಕ್ ಖರೀದಿಸಿದ ಯುವಕ!
56ನೇ ಸಾಲಿನಲ್ಲಿ ರಾಯಚೂರು, ಗುಲ್ಬರ್ಗ, ಬೀದರ್ ಜಿಲ್ಲೆಗಳಲ್ಲಿ ಮಾತ್ರ ಬೇಡ ಜಂಗಮ ಸಮುದಾಯದವರಿದ್ದಾರೆಂದು ರಾಷ್ಟ್ರಪತಿ ಆದೇಶ ಇತ್ತು. ಅದರೆ 76ನೇ ಸಾಲಿನ ತಿದ್ದುಪಡಿ ಮಾಡಿ ಇಡೀ ಕರ್ನಾಟಕ ರಾಜ್ಯದಲ್ಲಿ ಬೇಡಜಂಗಮರಿದ್ದಾರೆಂದು 27-07-1977 ರಂದು ಆದೇಶ ಆಗಿದೆ. ನ್ಯಾಯಾಲಯ ಸಹ ನಮಗೆ ಎಸ್ಸಿ ಸರ್ಟಿಫಿಕೇಟ್ ನೀಡಿದೆ ಎಂದು ಶಾಸಕ ರೇಣುಕಾಚಾರ್ಯ ಸಹೋದರ ವಾದಿಸಿದರು.
ದ್ವಾರಕೇಶ್ವರಯ್ಯ ಆಂಧ್ರಪ್ರದೇಶದ ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ಸುಳ್ಳು ಹೇಳಿ ಎಸ್ಸಿ ಸರ್ಟಿಫಿಕೇಟ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದಲಿತರು ಈ ವೇಳೆ ಪ್ರತ್ಯಾರೋಪ ಮಾಡಿದರು. ವಾಗ್ವಾದ ವಿಕೋಪಕ್ಕೆ ತಿರುಗಿದ ಹಿನ್ನೆಲೆ ದ್ವಾರಕೇಶ್ವರಯ್ಯರನ್ನು ಪೊಲೀಸ್ ವಾಹನದಲ್ಲಿ ಕೂರಿಸಿ ಅವರ ಮನೆಗೆ ಕಳುಹಿಸಲಾಯಿತು.