ದಾವಣಗೆರೆ : ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಭ್ರಷ್ಟಾಚಾರದ ಆರೋಪ ಮತ್ತು ಪ್ರತ್ಯಾರೋಪ ಜೋರಾಗಿದೆ. ಕಾಂಗ್ರೆಸ್ ನಾಯಕರು ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಇನ್ನೊಂದೆಡೆ ಬಿಜೆಪಿ ನಾಯಕರು ಶಾಮನೂರು ಕುಟುಂಬಸ್ಥರು ಭ್ರಷ್ಟಾಚಾರ ನಡೆಸಿದ್ದಾರೆ ದೂರಿದ್ದಾರೆ. ಅಲ್ಲದೆ ಭ್ರಷ್ಟಾಚಾರದ ವಿಚಾರ ದುಗ್ಗಮ್ಮ ದೇವಾಲಯದಲ್ಲಿ ಗಂಟೆ ಹೊಡೆಯುವ ಸವಾಲಿಗೆ ಬಂದು ತಲುಪಿದೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗು ಅವರ ರೈಟ್ ಹ್ಯಾಂಡ್ ಯಶವಂತ್ ರಾವ್ ಜಾಧವ್ ಭ್ರಷ್ಟಾಚಾರ ಮಾಡಿದ್ದಾರೆ. ಕುಂದವಾಡ ಕೆರೆ ರಿಪೇರಿ ಕಾಮಗಾರಿ, ಖಾಸಗಿ ಬಸ್ ನಿಲ್ದಾಣ ಕಾಮಗಾರಿಯಲ್ಲಿ ಇಬ್ಬರೂ ಲೂಟಿ ಮಾಡಿದ್ದಾರೆ ಎಂದು ಹೇಳಿದರು.
ಎಸ್.ಎಸ್.ಮಲ್ಲಿಕಾರ್ಜುನ ಅವರು ಸಚಿವರಾಗಿದ್ದ ಅವಧಿಯಲ್ಲಿ ಕೇವಲ 3.50 ಕೋಟಿ ರೂಪಾಯಿಯಲ್ಲಿ ಕುಂದವಾಡ ಕೆರೆಯನ್ನು ಅಭಿವೃದ್ಧಿಪಡಿಸಿದ್ದರು. ಬಳಿಕ ಶಾಮನೂರು ಶಿವಶಂಕರಪ್ಪ 50 ಲಕ್ಷ ರೂ ನೀಡಿ ಅದರ ಹೂಳು ತೆಗೆಸಿದ್ದರು. ಇದೀಗ ಕುಂದವಾಡ ಕೆರೆಗೆ ಸಂಸದ ಸಿದ್ದೇಶ್ವರ್ ಅವರು ಕೆಲ ರಿಪೇರಿ ಕಾಮಗಾರಿ ಮಾಡಿಸಲು 16 ಕೋಟಿ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್.ವೈ.ಟ್ಯಾಕ್ಸ್ (ಸಿದ್ದೇಶ್ವರ್ ಯಶವಂತ್ ರಾವ್ ಟ್ಯಾಕ್ಸ್) ಎಂದು ಅಧಿಕಾರಿಗಳ ಬಳಿ ಹಣ ಲೂಟಿ ಮಾಡಿದ್ದರು. ಸಂಸದ ಸಿದ್ದೇಶ್ವರ್ ಹೇಳಿದ ಕಡೆಯೆಲ್ಲ ಯಶವಂತ್ ರಾವ್ ಜಾಧವ್ ಅವರಿಗೆ 10% ಕಮಿಷನ್ ನೀಡುತ್ತಿದ್ದ ಅಧಿಕಾರಿಗಳ ಆಡಿಯೋ ದಾಖಲೆ ಇದೆ ಎಂದು ಪೆನ್ ಡ್ರೈವ್ ಪ್ರದರ್ಶಿಸಿದರು.
ಸಂಸದ ಸಿದ್ದೇಶ್ವರ್ ಅವರಿಗೆ ಹೋಗುತ್ತಿದ್ದ ಕಮಿಷನ್ ಹಣದಲ್ಲಿ 10% ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಅವರಿಗೆ ಹೋಗುತ್ತಿತ್ತು ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿರುವ ಆಡಿಯೋಗಳು ಈ ಪೆನ್ ಡ್ರೈವ್ನಲ್ಲಿಇದೆ. ಇದು ಸುಳ್ಳಾದರೆ ದುಗ್ಗಮ್ಮ ದೇವಸ್ಥಾನಕ್ಕೆ ಆಗಮಿಸಿ ಗಂಟೆ ಒಡೆಯಲಿ ಎಂದು ಸವಾಲು ಹಾಕಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ನಾವು ಲಂಚ ಸ್ವೀಕಾರ ಮಾಡಿಲ್ಲ ಎಂದು ದುಗ್ಗಮ್ಮ ದೇವಿಯ ಮುಂದೆ ಗಂಟೆ ಒಡೆಯಲು ನಾನು ಹಾಗು ಸಂಸದ ಜಿ.ಎಂ.ಸಿದ್ದೇಶ್ವರ್ ಸಿದ್ದರಿದ್ದೇವೆ. ಹೀಗೆ ನಮಗೆ ಸವಾಲೆಸೆಯುವ ಕಾಂಗ್ರೆಸ್ ಮುಖಂಡ ದಿನೇಶ್ ಶೆಟ್ಟಿ ದಾವಣಗೆರೆ ಪ್ರತಿಷ್ಠಿತ ಮನೆತನದವರಾದ ಎಲ್.ಬಸವರಾಜ್ ರವರನ್ನು ಅಪಹರಣ ಮಾಡಿಸಿ ಜೈಲಿಗೆ ಹೋಗಿದ್ದವರು ಎಂದು ಟೀಕಿಸಿದರು. ಈ ದಿನೇಶ್ ಶೆಟ್ಟಿ ಹಾಗು ಸಚಿವ ಮಲ್ಲಿಕಾರ್ಜುನ್ ಭ್ರಷ್ಟಾಚಾರ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ನಾನು ಶಾಮನೂರು ಕುಟುಂಬದ ಮೇಲೆ ಹಲವು ಆರೋಪ ಮಾಡಿ, ಸಾಕ್ಷಿ ಸಮೇತ ಪಾಲಿಕೆ ಆವರಣದ ರಂಗಮಂದಿರದಲ್ಲಿ ಅರ್ಧ ದಿನ ಕಾದರೂ ಅತ್ತ ಯಾರು ಸುಳಿದಿರಲಿಲ್ಲ ಎಂದು ಹೇಳಿದರು.
ದಿನೇಶ್ ಶೆಟ್ಟಿ ಪಿ.ಜೆ. ಬಡಾವಣೆಯ ಫುಟ್ ಪಾತ್ ಗಳಲ್ಲಿ ಅಂಗಡಿ ಇಟ್ಟುಕೊಂಡವರ ಬಳಿ ಚಂದಾ ವಸೂಲಿ ಮಾಡಿರುವುದು ಎಲ್ಲರಿಗೂ ಗೊತ್ತು. ಇನ್ನು ಇವರು ಎಸ್.ಎಸ್. ಮಾಲ್ ಕಟ್ಟಲು ರಸ್ತೆ, ಪಾರ್ಕ್ ಹಾಗೂ ಮುತ್ಸದ್ಧಿ ರಾಜಕಾರಣಿ ಗಾಂಜೀ ವೀರಪ್ಪನವರ ಸಮಾಧಿ ಜಾಗವನ್ನು ಸಹ ಕಬಳಿಸಿಲ್ಲವೇ? ಮಾಲ್ ಒತ್ತುವರಿಗೆ ಸಂಬಂಧಪಟ್ಟಂತೆ ಹೋರಾಟ ಮಾಡುತ್ತಿದ್ದ ಮಹಾದೇವ್ ನಿಗೂಢ ಸಾವಿಗೆ ಯಾರು ಕಾರಣ? ಎಂದು ಪ್ರಶ್ನಿಸಿದರು.
ದಾವಣಗೆರೆಗೆ ಬರಬೇಕಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಬರದಂತೆ ನಡೆಯುತ್ತಿರುವುದು ಇದೇ ಶಾಮನೂರು ಎಂದು ಆರೋಪ ಮಾಡಿದರು. ಅಲ್ಲದೆ ಶಾಮನೂರು ಶಿವಶಂಕರಪ್ಪನವರು ಕಿರಾಣಿ ಅಂಗಡಿ ನಡೆಸುತ್ತಿದ್ದವರು. ಬಾಪೂಜಿ ವಿದ್ಯಾ ಸಂಸ್ಥೆ ಸಿಕ್ಕ ಬಳಿಕ ಅವರು ಆಗರ್ಭ ಶ್ರೀಮಂತರಾದರು ಎಂದು ಅಂದಿನ ಗೃಹ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಹೇಳಿದ್ದರು ಎಂದು ಯಶವಂತ್ ರಾವ್ ಜಾಧವ್ ತಿರುಗೇಟು ನೀಡಿದರು.
ಇದನ್ನೂ ಓದಿ : ಧಾರವಾಡ: ನಿರಂತರ ಮಳೆಗೆ ಸರ್ಕಾರಿ ಶಾಲೆ ಮೇಲ್ಛಾವಣಿ ಕುಸಿತ.. ನಾಲ್ವರು ವಿದ್ಯಾರ್ಥಿಗಳಿಗೆ ಗಾಯ