ದಾವಣಗೆರೆ: ಕೊರೊನಾ ಸೋಂಕಿತರು ಪತ್ತೆಯಾಗಿರುವ ಪ್ರದೇಶಗಳಲ್ಲಿ ನಿತ್ಯ ವಿಶೇಷ ಕಾಳಜಿ ವಹಿಸಿ ಅಗ್ನಿಶಾಮಕ ದಳ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಸಾಯನಿಕ ಸಿಂಪಡಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.
ಪಿಪಿಇ ಕಿಟ್ ಧರಿಸಿ ಪೌರಕಾರ್ಮಿಕರು ಸಿಂಪಡಣೆ ಮಾಡುತ್ತಿದ್ದು, ಈ ಕೊರೊನಾ ವಾರಿಯರ್ಸ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಬಾಷಾ ನಗರ, ಜಾಲಿನಗರ, ಇಮಾಮ್ ನಗರ, ಕೆಟಿಜೆ ನಗರ, ಎಸ್ ಪಿ ಎಸ್ ರಸ್ತೆ ಸೇರಿದಂತೆ ಇತರ ಪ್ರದೇಶಗಳಲ್ಲಿ ಪೌರ ಕಾರ್ಮಿಕರು ಪಿಪಿಇ ಕಿಟ್ ಧರಿಸಿ ರಾಸಾಯನಿಕ ಸಿಂಪಡಿಸುತ್ತಿದ್ದು, ಅದರಲ್ಲಿಯೂ ಸೋಂಕು ಜಾಸ್ತಿಯಿರುವ ಪ್ರದೇಶಗಳಲ್ಲಿ ವಿಶೇಷ ಕಾಳಜಿ ವಹಿಸಿ ಈ ಕಾರ್ಯ ಸಮಾರೋಪಾದಿಯಲ್ಲಿ ಸಾಗುತ್ತಿದೆ.
ಕ್ವಾರಂಟೈನ್ನಲ್ಲಿ ಇಡಲಾಗಿರುವ ರತನ್ ಲಾಡ್ಜ್, ಹೋಟೆಲ್ ಅಭಿಮಾನ್ ಲಾಡ್ಜ್, ತ್ರಿಶೂಲ್ ಲಾಡ್ಜ್ ಸೇರಿದಂತೆ ಹಲವೆಡೆ ಸಿಂಪಡಣೆ ಮಾಡಲಾಗಿದೆ. ಅಂಗಡಿಗಳು, ಕ್ವಾರಂಟೈನ್ ಪ್ರದೇಶಗಳಲ್ಲಿ ಸ್ಯಾನಿಟರೈಸ್ ಸಿಂಪಡಿಸುವ ಕೆಲಸ ನಡೆಯುತ್ತಿದೆ. ಸೀಲ್ ಡೌನ್ ಮಾಡಲಾಗಿರುವ ಪ್ರದೇಶಗಳ ಪಕ್ಕದ ರಸ್ತೆಗಳು, ಬಡಾವಣೆಗಳಲ್ಲಿ ಸೋಂಕು ನಿವಾರಕ ಸಿಂಪಡಿಸುವ ಮೂಲಕ ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಲಾಗುತ್ತಿದೆ.
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯ ಸುತ್ತಮುತ್ತಲೂ ಕೊರೊನಾ ಸೋಂಕು ನಿವಾರಕವನ್ನು ಸ್ಪ್ರೇ ಮಾಡಲಾಗುತ್ತಿದೆ. ನಿತ್ಯವೂ ಲಾಕ್ ಡೌನ್ ಮಾಡಲಾಗಿರುವ ಪ್ರದೇಶಗಳಲ್ಲಿ ಪೌರ ಕಾರ್ಮಿಕರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಸಿ ಜೆ ಆಸ್ಪತ್ರೆ ಹಾಗೂ ಕ್ವಾರಂಟೈನ್ಗೆ ಕರೆದೊಯ್ಯುವ ಬಸ್ಗಳಿಗೂ ರಾಸಾಯಿನಿಕ ಸಿಂಪಡಣೆ ಮಾಡಲಾಗುತ್ತಿದೆ. ನಗರದ ಪ್ರಮುಖ ಬಡಾವಣೆಗಳಲ್ಲಿಯೂ ಈ ಕಾರ್ಯ ನಡೆಯಲಿದೆ. ಜನರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.