ದಾವಣಗೆರೆ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರಿಗೆ ದಾವಣಗೆರೆ ಕೋವಿಡ್ -19 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ 21 ವರ್ಷದ ಮಹಿಳೆ ಕೋವಿಡ್‌ಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಹೆರಿಗೆ ಮಾಡಿಸಲಾಗಿದೆ. ತಾಯಿಗೆ ಚಿಕಿತ್ಸೆ ಮುಂದುವರೆದಿದ್ದು, ಇದೀಗ ಮಗುವಿಗೂ ಕೊರೊನಾ ಸೋಂಕು ತಗುಲಿದೆಯೇ? ಎಂಬ ಆತಂಕ ಶುರುವಾಗಿದೆ.
ವೈದ್ಯರು, ನರ್ಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮಕ್ಕಳ ತಜ್ಞರಿಂದ ಮಗುವನ್ನು ಆರೈಕೆ ಮಾಡುತ್ತಿದ್ದಾರೆ. ಈ ವೇಳೆ ಸಾಧ್ಯವಾದಷ್ಟು ತಾಯಿ ಮತ್ತು ಮಗುವಿನ ನಡುವೆ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ.
ಈಗಾಗಲೇ ಮಗುವಿನ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ವರದಿ ಬಂದ ಬಳಿಕ ಮಗುವಿಗೆ ಕೊರೊನಾ ಇದೆಯೋ, ಇಲ್ಲವೋ ಎಂಬುದು ಗೊತ್ತಾಗಲಿದೆ.
ಇನ್ನು ಮಹಿಳೆಗೆ ಆರೈಕೆ ಮಾಡಿದ್ದ ದೊಡ್ಡಬಾತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂವರು ಆಶಾ ಕಾರ್ಯಕರ್ತೆಯರನ್ನು ಕ್ವಾರಂಟೈನ್ ಮಾಡಲಾಗಿದ್ದು, ಮಹಿಳೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ.