ಹರಿಹರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಯನ್ನು ಖಂಡಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಸ್.ರಾಮಪ್ಪ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ರೈತ ವಿರೋಧಿ ನೀತಿಯನ್ನು ಜಾರಿಗೆ ತರುವ ಮೂಲಕ ರಾಜ್ಯ ರೈತ ವರ್ಗಕ್ಕೆ ದ್ರೋಹ ಬಗೆದಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ವಿರೋಧದ ನಡುವೆಯು ಎಪಿಎಂಸಿ ಕಾಯ್ದೆಗೆ ಕೆಲವು ತಿದ್ದುಪಡಿಯನ್ನು ಮಾಡಿ ಜಾರಿಗೆ ತಂದಿದ್ದು ರೈತರಿಗೆ ಅನುಕೂಲ ಮಾಡಲು ಅಲ್ಲ ಬದಲಾಗಿ ಬಂಡವಾಳ ಶಾಹಿಗಳ ಅಭಿವೃದ್ದಿಗಾಗಿ ಈ ಕಾಯ್ದೆಯನ್ನು ಜಾರಿಗೆ ತಂದ ಪರಿಣಾಮ ತಾವು ಬೆಳೆದ ಬೆಳಗೆ ನ್ಯಾಯ ಸಮ್ಮತವಾದ ಬೆಲೆ ಸಿಗದೆ ರೈತನನ್ನು ಸಾಲಗಾರನ್ನಾಗಿ ಮಾಡಲು ಹೊರಟಿರುವವರು ನಮ್ಮದು ರೈತರ ಪರ ಸರ್ಕಾರ ಎಂದು ಹೇಳಿ ಕೊಳ್ಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ದೂರಿದರು.
ವಾರ್ಷಿಕ ಸುಮಾರು 20 ಸಾವಿರ ಕೋಟಿ ಆದಾಯ ತರುವ ರೈಲ್ವೇ ಇಲಾಖೆಯನ್ನು ಖಾಸಗೀಕರಣಗೊಳಿಸುವ ಯೋಜನೆ, ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆ ಯಿಂದ 12 ಗಂಟೆಗೆ ಹೆಚ್ಚಿಸುತ್ತಿರುವ ಕಾರ್ಮಿಕ ನೀತಿ ಹಾಗೂ ಅದಾನಿ, ಅಂಬಾನಿಯಂತಹ ಬಂಡವಾಳ ಶಾಹಿಗಳ ಸಾವಿರಾರು ಕೊಟಿಯ ಸಾಲವನ್ನು ಮನ್ನ ಮಾಡುವ ಕೇಂದ್ರ ಸರ್ಕಾರ ರೈತರ ಸಾಲವನ್ನು ಮನ್ನ ಮಾಡಲು ಮೀನಾಮೇಶ ಮಾಡುತ್ತಿರುವುದನ್ನು ಗಮನಿಸಿದರೆ ಮೋದಿ ನೇತೃತ್ವದ ಸರ್ಕಾರ ದೇಶದ ಶ್ರೀಮಂತರ ಪರವಾಗಿದೆ ವಿನಃ ಬಡವರ ಪರ ಇಲ್ಲ ಎಂದು ಆರೋಪಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಟೇಲ್ ಮಾತನಾಡಿ, ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದ ಅವರು ಈ ನೀತಿಯಿಂದಾಗಿ ಮುಂದಿನ ದಿನಗಳಲ್ಲಿ ಎಪಿಎಂಸಿ ಕಣ್ಮರೆಯಾಗಿ ಇತಿಹಾಸದ ಪುಟಗಳಲ್ಲಿ ಸೇರುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು.
ಧರಣಿಯ ಕೊನೆಯಲ್ಲಿ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಅಬೀದ್ ಅಲಿ, ಎಪಿಎಂಸಿ ಅಧ್ಯಕ್ಷ ಮನುಮಂತಪ್ಪ ರೆಡ್ಡಿ, ನಗರಸಭೆ ಸದಸ್ಯರಾದ ಎಸ್.ಎಂ ವಸಂತ್, ಬಾಬುಲಾಲ್ ಹಾಗೂ ಇತರರು ಇದ್ದರು.