ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಎನಿಸಿರುವ ಸೂಳೆಕೆರೆ ಉಳಿವಿಗೆ ಚನ್ನಗಿರಿ ತಾಲೂಕಿನ ಪಾಂಡುಮಟ್ಟಿಯ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮೀಜಿ ನೇತೃತ್ವದಲ್ಲಿ ಖಡ್ಗ ಶಾಂತಿಸಾಗರ ಸಂರಕ್ಷಣಾ ಸಮಿತಿಯು ದೇಣಿಗೆ ಸಂಗ್ರಹಿಸುತ್ತಿದೆ.
ಶಾಂತಿಸಾಗರ ಸರ್ವೆ ಕಾರ್ಯಕ್ಕೆ ಕರ್ನಾಟಕ ನೀರಾವರಿ ನಿಗಮವು 11 ಲಕ್ಷ ರೂಪಾಯಿ ಅನುಮೋದನೆ ನೀಡಿದೆ. ಸರ್ವೆ ಕಾರ್ಯದ ಸಮಯದಲ್ಲಿ ಕೆರೆಯ ಸರಹದ್ದಿನ ಸುತ್ತಲೂ ಆಳವಾದ ಮತ್ತು ಅಗಲವಾದ ಟ್ರೆಂಚ್ ಮತ್ತು ಮುಂದಿನ ಬೇಸಿಗೆಗೆ ಹೂಳನ್ನು ತೆಗೆಸಲು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜನರು ತಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡಬೇಕು ಎಂದು ಸಮಿತಿ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ಸೂಳೆಕೆರೆಯನ್ನು ಉಳಿಸಲು ಸಹಕರಿಸಿ ಎಂದು ಸಮಿತಿ ಕೋರಿದೆ.
ಖಡ್ಗ ಶಾಂತಿಸಾಗರ ಸಂರಕ್ಷಣಾ ಮಂಡಳಿಯ ಉದ್ದೇಶಗಳೇನು....?
1.ಸೂಳೆಕೆರೆ ಅಥವಾ ಶಾಂತಿಸಾಗರ ಕೆರೆ ಒತ್ತುವರಿಯನ್ನು ಕಾನೂನಾತ್ಮಕವಾಗಿ ತೆರವುಗೊಳಿಸಬೇಕು.
2.ಶೇಕಡಾ 60 ರಿಂದ 70 ಭಾಗ ತುಂಬಿರುವ ಹೂಳನ್ನು ವೈಜ್ಞಾನಿಕ ಮತ್ತು ಕಾನೂನಾತ್ಮಕವಾಗಿ ತೆಗೆಸಬೇಕು.
3.ಪ್ರಸ್ತುತ 1.50 ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು 4 ರಿಂದ 5 ಟಿಎಂಸಿಗೆ ಹೆಚ್ಚಿಸಬೇಕು ಎಂಬುದು ಸಮಿತಿಯ ಅಧ್ಯಕ್ಷ ಗುರುಬಸವ ಮಹಾಸ್ವಾಮೀಜಿಯ ಆಗ್ರಹ.
4.ಕೆರೆಯ ನೀರಿನ ಹಂಚಿಕೆಯ ವಿಷಯವಾಗಿ ಕಾನೂನಾತ್ಮಕ ಮತ್ತು ನಿಖರವಾಗಿ ರೂಪುರೇಷೆ ಸಿದ್ಧಪಡಿಸಬೇಕು.
5.ಮುಂದಿನ ವರ್ಷಗಳಲ್ಲಿ ಚನ್ನಗಿರಿಯ ಎಲ್ಲಾ ಜನರು ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ಇಸ್ರೇಲ್ ಮಾದರಿಯಂತೆ ಮೈಕ್ರೋ ಅಥವಾ ನ್ಯಾನೋ ಇರಿಗೇಷನ್ ಮೂಲಕ ಕೆರೆಯ ನೀರನ್ನು ಬಳಸುವುದು,
6.ರಕ್ಷಿತ, ಸಮೃದ್ಧಿಯ, ಸ್ವಚ್ಛ ಶಾಂತಿಸಾಗರವನ್ನು ಉಳಿಸಿ ಬೆಳೆಸಬೇಕು ಎಂಬ ಧ್ಯೇಯೋದ್ದೇಶಗಳನ್ನು ಹೊಂದಲಾಗಿದೆ.
ಒಟ್ಟಿನಲ್ಲಿ ಸೂಳೆಕೆರೆ ಉಳಿವಿಗೆ ಹಲವು ವರ್ಷಗಳಿಂದ ಖಡ್ಗ ಸಂಘಟನೆ ಹೋರಾಟ ನಡೆಸುತ್ತಿದೆ. ಮಾತ್ರವಲ್ಲ, ದೇಣಿಗೆ ರೂಪದಲ್ಲಿ ಪ್ರತಿ ರೂಪಾಯಿಯ ಲೆಕ್ಕ ಮತ್ತು ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಖಡ್ಗ ಸಂಘದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಹೀಗಾಗಿ ಜನರು ಹೆಚ್ವಿನ ದೇಣಿಗೆ ಕೊಟ್ಟು ಕೆರೆ ಉಳಿವಿಗೆ ನೆರವಾಗಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.