ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯಲ್ಲಿ ದಾವಣಗೆರೆ ಜಿಲ್ಲೆಗೆ ಆದ್ಯತೆ ನೀಡಬೇಕು. ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು. ಈ ಸಂಬಂಧ ಜಿಲ್ಲೆಯಲ್ಲಿರುವ ಬಿಜೆಪಿಯ ಎಲ್ಲಾ ಶಾಸಕರ ಸಭೆ ಮಾಡಿ ಸಿಎಂಗೆ ಒತ್ತಾಯ ಮಾಡಿದ್ದೇವೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾವಣಗೆರೆ ಮಧ್ಯ ಕರ್ನಾಟಕ. ಇದಕ್ಕೆ ರಾಜಧಾನಿ ಆಗೋ ಅರ್ಹತೆ ಇದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಸಂಪರ್ಕ ಸೇತುವೆ ದಾವಣಗೆರೆ. ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.
ತಮಟೆ ಬಾರಿಸಿ ಬಾಯಿ ಬಡಿದುಕೊಂಡರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ. ರಾಜಕೀಯವಾಗಿ ನಾವು ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಕೇಳಿದ್ದೇವೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನರ ಆಸೆ ಕೂಡ ಸಚಿವನಾಗಬೇಕು ಅನ್ನೋದು. ಸಿಎಂ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧರಾಗಿದ್ದೇವೆ. ಹಾದಿ ರಂಪ, ಬೀದಿ ರಂಪ ಮಾಡೋದು ನಮಗೆ ಇಷ್ಟ ಇಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಸೆಯನ್ನು ರೇಣುಕಾಚಾರ್ಯ ವ್ಯಕ್ತಪಡಿಸಿದರು.