ದಾವಣಗೆರೆ: ಬಿಜೆಪಿಗೆ ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ, ಕಳೆದ ಚುನಾವಣೆಗಳಿಗೆ ಹೋಲಿಸಿದ್ರೆ ಅದರ ಸರಾಸರಿ ಹೆಚ್ಚಾಗುತ್ತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಮತಗಳ ಸರಾಸರಿ ಪ್ರಮಾಣ ಈ ಬಾರಿ ಹೆಚ್ಚಾಗುತ್ತೆ, ಸವದಿ ಶೆಟ್ಟರ್ ಹೋಗಿರುವುದರಿಂದ ಲಿಂಗಾಯತ ಮತ ಸರಾಸರಿಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು.
ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ, ಅವರು ಹೇಳಿಕೆ ನಾವು ತಿರುಚಿಲ್ಲ. ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬಂದಷ್ಟು ಬಿಜೆಪಿಗೆ ಲಾಭ, ರಾಹುಲ್ ಗಾಂಧಿಯವರು ಹೋದ ಕಡೆಯೆಲ್ಲೆಲ್ಲಾ ಅದು ಸಾಬೀತಾಗಿದೆ, ರಾಹುಲ್ ಗಾಂಧಿ ನಿನ್ನೆ ಕೂಡಲಸಂಗಮಕ್ಕೆ ಹೋಗಿದ್ದು ತೋರಿಕೆಗಾಗಿ ವಿಭೂತಿ ಹಚ್ಚಿದ್ದಾರೆ ಎಂದು ವ್ಯಂಗ್ಯವಾಡಿದರು.
ವೀರಶೈವ ಮತಗಳು ಕೈಬಿಡುತ್ತದೆ ಎಂಬ ಆತಂಕ ಇಲ್ಲ ಅದರ ಸರಾಸರಿ ಹೆಚ್ಚಾಗುತ್ತದೆ. ಈ ಬಾರಿ 19 ರಿಂದ 30 ವರ್ಷದ ಯುವಕರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ಹೊಸ ಬದಲಾವಣೆ ಬಯಸಿ ಯುವಕರು ಬಿಜೆಪಿ ಕಡೆ ಬರುತ್ತಿದ್ದಾರೆ ಎಂದು ಹೇಳಿದರು. ಇನ್ನು ಮುಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೂಸು ಹುಟ್ಟುವುದಕ್ಕೆ ಮುಂಚೆ ಕುಲಾವಿ ಹೊಲಿಸುವುದು ಸರಿಯಲ್ಲ. ಫಲಿತಾಂಶ ಬಂದ ಬಳಿಕ ಪಕ್ಷದ ವರಿಷ್ಠರು ನಿರ್ಧಾರ ತೆಗದುಕೊಳ್ಳುತ್ತಾರೆ ಎಂದರು.
ಇನ್ನು ಡಿಕೆಶಿ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿಯವರು ಬಿಜೆಪಿಯವರ ಭಾವನೆಗಳ ಜೊತೆ ಆಟ ಆಡುತ್ತಾರೆ. ಲಿಂಗಾಯತ ಡ್ಯಾಂ ಒಡೆದಿದೆ ಎಂದು ಹೇಳಿದವರು ಡಿಕೆಶಿಯವರಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಕುಟುಕಿದರು.
ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಗುತ್ತಿದೆ: ಈಗಾಗಲೇ ರಾಜ್ಯದಲ್ಲಿ ಪ್ರವಾಸ ಪ್ರಚಾರಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಹರಿಹರ, ಕುಂದಗೋಳ, ಬೆಳಗಾವಿ, ಕಲ್ಯಾಣ ಕರ್ನಾಟಕ ಹೀಗೆ ಹಂತ ಹಂತವಾಗಿ ಪ್ರವಾಸ ಕೈಗೊಂಡಿದ್ದೇವೆ. ಜನ ಬಹಳ ಗಾಢವಾಗಿ ವಿಚಾರ ಮಾಡುವ ಮೂಲಕ ಒಂದು ನಿರ್ಧಾರಕ್ಕೆ ಬರುತ್ತಿದ್ದಾರೆ, ಯಾರು ಜನರ ವಿಶ್ವಾಸ ಗಳಿಸಿದ್ದಾರೆ ಅವರಿಗೆ ಜನ ಆಶೀರ್ವಾದ ಮಾಡಲಿದ್ದು, ನಾವು ಅಭಿವೃದ್ಧಿ ಕೆಲಸಗಳಿಂದ ಜನರ ಮನ ಗೆದ್ದಿದ್ದೇವೆ ಎಂದರು.
ಇದನ್ನೂ ಓದಿ: ಚುನಾವಣೆ ಬಳಿಕ ನಾಯಕತ್ವದ ನಿರ್ಧಾರ: ಪ್ರಹ್ಲಾದ್ ಜೋಶಿ ಸ್ಪಷ್ಟನೆ