ದಾವಣಗೆರೆ : ನಮ್ಮಲ್ಲಿ ಏನು ಇದೆಯೋ ಅದು ನಾಗರಿಕತೆ. ನಾಗರಿಕತೆ ಬೆಳೆದಂತೆ ಸಂಸ್ಕೃತಿ ಮರೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಹರಿಹರ ನಗರದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯರು ನಾಗರಿಕತೆಯನ್ನು ನದಿಯ ತಟದಲ್ಲಿ ಪ್ರಾರಂಭಿಸಿದ್ದರು. ಜಲಮೂಲ ಜೀವನಕ್ಕೆ ಮುಖ್ಯ. ಅದರ ಜೊತೆ ಪ್ರತಿ ನದಿಯೂ ತನ್ನದೇ ಆದ ಸಂಸ್ಕೃತಿಯನ್ನು ಬೆಳೆಸುತ್ತದೆ.
ನಾಗರಿಕತೆ ಹಾಗೂ ಸಂಸ್ಕೃತಿ ಒಟ್ಟಿಗೆ ಬೆಳೆಯಬೇಕು. ನಮ್ಮಲ್ಲಿ ಏನು ಇದೆಯೋ ಅದು ನಾಗರಿಕತೆ. ಕಾಲಕ್ಕೆ ತಕ್ಕಂತೆ ನಾಗರಿಕತೆ ಬದಲಾಗಿದೆ. ನಾಗರಿಕತೆ ಬೆಳೆದಂತೆ ಸಂಸ್ಕೃತಿ ಮರೆಯಾಗಿದೆ. ನಾಗರಿಕತೆ ಬೆಳೆಯಬೇಕು. ಆದರೆ, ಸಂಸ್ಕೃತಿ ಬದಲಾಗಬಾರದು ಎಂದು ಜನರಿಗೆ ನಾಗರಿಕತೆಯ ಪಾಠ ಮಾಡಿದರು.
ನಾಗರಿಕತೆ ಬೆಳೆದಂತೆ ಮಾನವೀಯ ಗುಣ ಉದಾರತೆ, ದಯಾ ಗುಣ ಕಡಿಮೆಯಾಗುತ್ತಿದೆ. ತುಂಗೆಯ ತಟದಲ್ಲಿ ಸಂಸ್ಕೃತಿ ಬೆಳೆಸುವ ಉದ್ದೇಶ ಶ್ರೀಗಳದ್ದು, ಮೋದಿಯವರು ಕಾಶಿಯಲ್ಲಿ ಅಮೂಲ್ಯ ಬದಲಾವಣೆ ಮಾಡಿದ್ದಾರೆ.
ಇಂದು ಭವ್ಯವಾದ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಗಂಗಾರತಿ ನಡೆಯುತ್ತಿದೆ. ಅದೇ ರೀತಿ ದಕ್ಷಿಣ ಭಾಗದ ಹರಿಹರದಲ್ಲಿ ತುಂಗಾರತಿ ನಡೆಯಲಿದೆ. ಕಲುಷಿತವಾಗದಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಹರಿ ಮತ್ತು ಹರ ಶಕ್ತಿಯ ಸಂಗಮ : ಹರಿಹರ ಹೆಸರಿನಲ್ಲಿಯೇ ಸಂಗಮ ಇದೆ. ಹರಿ ಮತ್ತು ಹರ ಶಕ್ತಿಯ ಸಂಗಮ, ವಿಜ್ಞಾನ- ತತ್ವಜ್ಞಾನ ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಹರಿ-ಹರ ಎರಡು ಶಕ್ತಿಯ ಕೇಂದ್ರ, ಇದರಿಂದ ಸಾವಿರಪಟ್ಟು ಶಕ್ತಿ ಉಂಟಾಗುತ್ತದೆ.
ನಗರ ಮತ್ತು ಪ್ರದೇಶದ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಿ ಕೆಲಸ ಮಾಡಲಾಗುವುದು. 40 ಕಿ.ಮೀ ರಸ್ತೆ ಅಭಿವೃದ್ಧಿಗೆ ನನ್ನ ಸರ್ಕಾರ ಅನುದಾನ ನೀಡಿದೆ. 50 ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿ, ಪೊಲೀಸ್ ಪಬ್ಲಿಕ್ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ ಭೈರನಪಾದ ಏತ ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಇದನ್ನೂ ಓದಿ: ಹರಿಹರ: ತುಂಗಭದ್ರಾ ಆರತಿ ಮಂಟಪಗಳ ಕಾಮಗಾರಿಗೆ ಸಿಎಂ ಶಿಲಾನ್ಯಾಸ