ದಾವಣಗೆರೆ : ಹರಿಹರ ಪಟ್ಟಣದ ತುಂಗಭದ್ರಾ ನದಿ ಪಾತ್ರವನ್ನು ಸ್ವಚ್ಛಗೊಳಿಸುವ ಕಾರ್ಯ ಬಿರುಸುಗೊಂಡಿದ್ದು, ನನ್ನ ಊರು ನನ್ನ ಹೊಣೆ ವಾಟ್ಸ್ಆ್ಯಪ್ ಗ್ರೂಪ್ ತಂಡದ ಸದಸ್ಯರ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಸಾಥ್ ನೀಡಿದರು.
ಜಿಲ್ಲೆಯಲ್ಲಿನ ಪುಣ್ಯ ಕ್ಷೇತ್ರಗಳಲ್ಲಿ ಹರಿಹರ ಕೂಡ ಒಂದು. ಇಲ್ಲಿ ಹರಿಹರೇಶ್ವರ ನೆಲೆಸಿದ್ದಾನೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಈ ತಾಣವನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ.
ಹರಿಹರೇಶ್ವರನ ದೇವಸ್ಥಾನದ ಹಿಂಭಾಗದಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಪ್ರತಿ ವರ್ಷ ಮಕರ ಸಂಕ್ರಮಣ ಅಂದ್ರೆ ಜನವರಿ ತಿಂಗಳಿನಲ್ಲಿ ನದಿ ತಟದಲ್ಲಿ, ಪುಣ್ಯ ಸ್ನಾನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದ ಸಾವಿರಾರು ಭಕ್ತರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರವನ್ನು ಸ್ವಚ್ಛಗೊಳಿಸಬೇಕೆಂದು ಸಂಕಲ್ಪ ಮಾಡಿ ಸತತ ಮೂರು ವಾರಗಳಿಂದ ಸ್ವಚ್ಛತೆ ಆಂದೋಲನ ನಡೆಸುತ್ತಿದೆ.
ನನ್ನ ಊರು ನನ್ನ ಹೊಣೆ, ವಾಟ್ಸ್ಆ್ಯಪ್ ತಂಡದ ಜತೆ ನಾಗರಿಕರು ಮಾತ್ರವಲ್ಲದೇ ಮಾಜಿ ಶಾಸಕ ಬಿ.ಪಿ ಹರೀಶ್, ರಾಘವೇಂದ್ರ ಮಠದ ಪ್ರಧಾನ ಅರ್ಚಕ ವರಹಾಚಾರ್ಯ, ನಗರಸಭೆ ಸದಸ್ಯರು, ನಗರಸಭೆ ಆಯುಕ್ತರು, ಹಿರಿಯ, ಕಿರಿಯ ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರ ತಂಡ ಕೈ ಜೋಡಿಸಿದ್ದಾರೆ.