ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ನಿರಾಳರಾಗಿದ್ದಾರೆ. ಪೊಲೀಸ್ ಇಲಾಖೆ ಕಳೆದುಕೊಂಡ ಫೋನ್‌ಗಳನ್ನು ಹುಡುಕಿಕೊಟ್ಟಿದೆ. ಇದಕ್ಕೆ CEIR ಪೋರ್ಟಲ್ ಪೊಲೀಸ್ ಅಧಿಕಾರಿಗಳಿಗೆ ಸಹಕಾರಿಯಾಗಿದೆ. ಈ ಮೂಲಕ ಸುಮಾರು 20 ಲಕ್ಷ ರೂ ಮೌಲ್ಯದ 130 ಮೊಬೈಲ್‌ಗಳನ್ನು ವಶಕ್ಕೆ ಪಡೆದ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಸಾರ್ವಜನಿಕರಿಗೆ ಅವಶ್ಯಕವಾದ ವಸ್ತು ಎಂದರೆ ಅದು ಮೊಬೈಲ್. ಪ್ರತಿಯೊಂದು ಕೆಲಸ ಆಗ್ಬೇಕಾದ್ರೂ ಕೈಯಲ್ಲಿ ಮೊಬೈಲ್ ಬೇಕಿರುವ ಜಮಾನ ಇದು. ಆ ಮೊಬೈಲ್ ಒಂದು ವೇಳೆ ಕಳೆದು ಹೋದಲ್ಲಿ ಇಡೀ ಪ್ರಪಂಚವೇ ಮುಳುಗಿರುವ ಭಯ ಜನರನ್ನು ಆವರಿಸಿಕೊಳ್ಳುತ್ತದೆ. ಆದರೆ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್‌ಗಳನ್ನು ದಾವಣಗೆರೆ ಪೊಲೀಸರು ಸುಲಭವಾಗಿ ಪತ್ತೆ ಹಚ್ಚಿ ಆಯಾ ವಾರಸುದಾರರಿಗೆ ಹಸ್ತಾಂತರ ಮಾಡಿದ್ದು ಜನರಲ್ಲಿ ಸಂತಸ ಉಂಟುಮಾಡಿದೆ.
CEIR (Central Equipment Identity Register) ಪೋರ್ಟಲ್ ಮೂಲಕ ಜನರ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ಅವರ ಕೈ ಸೇರುವಂತೆ ಪೊಲೀಸರು ಮಾಡಿದ್ದಾರೆ. ಕಳುವಾದ, ಸುಲಿಗೆಯಾದ, ಕಾಣೆಯಾದ ಮೊಬೈಲ್‌ಗಳ ಬ್ಲಾಕ್ ಮಾಡಲು ಕೇಂದ್ರ ಟೆಲಿ ಕಮ್ಯುನಿಕೇಶನ್ ಇಲಾಖೆಯಿಂದ ಜಾರಿಗೆ ತಂದಿರುವ ನೂತನ ವ್ಯವಸ್ಥೆ ಈ ಪೋರ್ಟಲ್ನಲ್ಲಿದ್ದರಿಂದ ತನಿಖೆಗೆ ಸಹಕಾರಿಯಾಗಿದೆ.
ಜನರು ಮೊಬೈಲ್ ಕಳೆದುಕೊಂಡು ಈ CEIR ಪೋರ್ಟಲ್ಗೆ ಭೇಟಿ ನೀಡಿ, ತಮ್ಮ ಮೊಬೈಲ್ನ ಸಂಪೂರ್ಣ ಮಾಹಿತಿ ನೀಡಿ ನೋಂದಾಯಿಸಿ, ತಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿದ್ದರು. ಬಳಿಕ ತಮ್ಮ ಕೆಲಸ ಶುರು ಮಾಡಿದ ದಾವಣಗೆರೆ ಪೊಲೀಸರು ನೂತನ CEIR ವೆಬ್ ಪೋರ್ಟಲ್ ಮೂಲಕ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ನೂತನ CEIR ವೆಬ್ ಪೋರ್ಟಲ್ ಮೂಲಕ ಸುಮಾರು 20,00,000 ಮೌಲ್ಯದ ವಿವಿಧ ಕಂಪನಿಯ 130 ಮೊಬೈಲ್‌ಗಳನ್ನು ವಶಕ್ಕೆ ಒಡೆದು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
CEIR ಪೋರ್ಟಲ್ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿಂದ ಪ್ರಸ್ತುತ ತಿಂಗಳಿನವರೆಗೆ ಒಟ್ಟು 3,290 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಅವುಗಳಲ್ಲಿ 500 ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ. ಇದಲ್ಲದೆ ಈಗಾಗಲೇ 100 ಮೊಬೈಲ್‌ಗಳನ್ನು ಮೊಬೈಲ್ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಕಳುವು, ಸುಲಿಗೆ ಅಥವಾ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ CEIR ವೆಬ್ ಪೋರ್ಟಲ್ಗೆ ಭೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಲಾಗಿದೆ.
ಎಸ್ಪಿ ಉಮಾಪ್ರಶಾಂತ್ ಪ್ರತಿಕ್ರಿಯೆ: ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿ, "CEIR ವೆಬ್ ಪೋರ್ಟಲ್‌ನಲ್ಲಿ ಮೊಬೈಲ್ ಕಳೆದುಕೊಂಡವರು ಅವರೇ ಮಾಹಿತಿ ನಮೂದಿಸಿ ಪ್ರಕರಣ ದಾಖಲಿಸಿದ್ದರು. ಕಳೆದು ಹೋದ ಮೊಬೈಲ್ನಲ್ಲಿ ಕೆಲವರು ಸಿಮ್ ಹಾಕಿ ಉಪಯೋಗಿಸಿದ ಬೆನ್ನಲ್ಲೇ ಅಲ್ಲಿಂದ ಸಂದೇಶ ಬರುವುದರಿಂದ ನಿಮ್ಮ ಮೊಬೈಲ್ ಉಪಯೋಗಿಸಲಾಗುತ್ತಿದೆ ಎಂದು ನೊಟೀಸ್ ಕೂಡಾ ಬರುತ್ತದೆ. ಈ ವೇಳೆ ಮೊಬೈಲ್ ಬ್ಲಾಕ್ ಮಾಡಬಹುದು. ನಮ್ಮ ಸಿಬ್ಬಂದಿ ಲೊಕೇಷನ್ ಟ್ರೇಸ್ ಮಾಡಿ ಮೊಬೈಲ್ ವಶಕ್ಕೆ ಪಡೆಯಬಹುದು".
"ಈ ಪೋರ್ಟಲ್ ಫೆ. 2023 ರಿಂದ ಆರಂಭವಾಗಿದೆ. ಇದರ ಸಹಾಯದಿಂದ 3293 ಮೊಬೈಲ್ ಬ್ಲಾಕ್ ಮಾಡಿದ್ದೇವೆ. ಇದರಲ್ಲಿ 520 ಮೊಬೈಲ್ ಪತ್ತೆಯಾಗಿವೆ. 390 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಿದ್ದೇವೆ. ಇಂದು 130 ಮೊಬೈಲ್ ವಾರಸುದಾರರಿಗೆ ಹಸ್ತಾಂತರ ಮಾಡ್ತಿದ್ದೇವೆ. ಇಲ್ಲಿ ತನಕ ಇಡೀ ದೇಶದಲ್ಲಿ 9,74,088 ಮೊಬೈಲ್‌ಗಳನ್ನು ಬೇರೆ ಬೇರೆ ರಾಜ್ಯದ ಪೊಲೀಸ್ ಇಲಾಖೆ ಸಿಬ್ಬಂದಿ ಬ್ಲಾಕ್ ಮಾಡಿದ್ದಾರೆ. 4,11,969 ಮೊಬೈಲ್ ಸಿಕ್ಕಿದ್ದು, ಇದರಲ್ಲಿ 1,52,932 ಮೊಬೈಲ್‌ಗಳನ್ನು ನಮ್ಮ ರಾಜ್ಯ ಬ್ಲಾಕ್ ಮಾಡುವಲ್ಲಿ ಮೊದಲ ಸ್ಥಾನದಲ್ಲಿದೆ'' ಎಂದರು.
ಇದನ್ನೂ ಓದಿ: ಮೊಬೈಲ್ ಕಳವು ನಡೆದರೆ ಎಫ್ಐಆರ್ ಕಡ್ಡಾಯ: ಬೆಂಗಳೂರು ಪೊಲೀಸ್ ಕಮಿಷನರ್ ಖಡಕ್ ಸೂಚನೆ