ದಾವಣಗೆರೆ : ಕುಷ್ಟರೋಗ ನಿರ್ಮೂಲನಾ ದಿನದ ನಿಮಿತ್ತ ಜಿಲ್ಲೆಯನ್ನು ‘ಕುಷ್ಟರೋಗ ಮುಕ್ತ ಜಿಲ್ಲೆಯಾಗಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಜನವರಿ 30 ರಿಂದ 15 ದಿನಗಳ ಕಾಲ 'ಸ್ಪರ್ಶ್ ಕುಷ್ಟರೋಗ ಅರಿವು' ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಪರ್ಶ್ ಕುಷ್ಟರೋಗ ಅರಿವು ಆಂದೋಲನ - 2020 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸ್ಪರ್ಶ್ ಕುಷ್ಟರೋಗ ಅರಿವು ಆಂದೋಲನವನ್ನು ಪ್ರತಿ ವರ್ಷದಂತೆ ಮಹಾತ್ಮಗಾಂಧಿ ಹುತಾತ್ಮರಾದ ಜ.30 ರಂದು ಆಚರಿಸಲಾಗುವುದು. ಇದರ ನಿಮಿತ್ತ ಜ.30 ರಿಂದ ಫೆ.13 ರವರೆಗೆ ಜಿಲ್ಲಾದ್ಯಂತ ಕುಷ್ಟರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ನಮ್ಮ ಜಿಲ್ಲೆಯನ್ನು ಕುಷ್ಟರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ವ್ಯಾಪ್ತಿಯ ಪಿಡಿಒ, ಇಒಗಳು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಈ ಆಂದೋಲನ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.