ದಾವಣಗೆರೆ: ಹೆಚ್ ಡಿ ಕುಮಾರಸ್ವಾಮಿಯವರೇ ನೀವು ಕಾಂಗ್ರೆಸ್ ಮುಖಂಡರಿಗೆ ಹೇಳಿ ಧಮ್ಮು, ಗಂಡಸ್ತನ ಎನ್ನುವ ಮಾತನ್ನು. ಭಾರತೀಯ ಜನತಾ ಪಕ್ಷದವರು ಅಭಿವೃದ್ಧಿ ಹಾಗೂ ಕೋಮು ಸಾಮರಸ್ಯದಲ್ಲಿ ಗಂಡಸ್ತನ ತೋರಿಸುತ್ತಿದ್ದೇವೆ. ಗಂಡಸ್ತನದ ಬಗ್ಗೆ ಮಾತನಾಡಿ ವಿವಾದ ಹುಟ್ಟುಹಾಕುವುದು ಗಂಡಸ್ತನ ಅಲ್ಲ ಎಂದು ಹೊನ್ನಾಳಿ ಶಾಸಕರೂ ಆಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಬೇಷರತ್ ಕ್ಷಮೆ ಕೇಳಬೇಕು. ಹೆಚ್ ಡಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು, ಆಡಳಿತದ ಅನುಭವ ಇದೆ. ಅವರು ಸಿಎಂ ಬೊಮ್ಮಾಯಿ ಅವರ ಗಂಡಸ್ತನದ ಬಗ್ಗೆ ಮಾತನಾಡಿದ್ದನ್ನ ನಾನು ಖಂಡಿಸುತ್ತೇನೆ. ಬೊಮ್ಮಾಯಿ ಅವರಿಗೆ ಗೊತ್ತಿದೆ ಯಾವ ರೀತಿ ಆಡಳಿತ ಮಾಡಬೇಕೆಂದು, ಸಂಘರ್ಷಕ್ಕೆ ಅನುವು ಮಾಡಿಕೊಡೋದಿಲ್ಲ, ಸಾಮರಸ್ಯ ಕಾಪಾಡುತ್ತಾರೆ ಎಂದು ಹೇಳಿದರು.
ಹಿಜಾಬ್, ದಿ ಕಾಶ್ಮೀರ್ ಫೈಲ್ಸ್, ಭಗವದ್ಗೀತೆ, ಹಲಾಲ್, ಇವೆಲ್ಲ ವಿವಾದ ಹುಟ್ಟುಹಾಕಿದ್ದು ಕಾಂಗ್ರೆಸ್ ಮುಖಂಡರು ಎಂದು ರೇಣುಕಾಚಾರ್ಯ ಆರೋಪಿಸಿದರು. ಕಾಂಗ್ರೆಸ್ನವರು ಹಿಜಾಬ್ ಬೆಂಬಲಿಸದಿದ್ದರೆ, ಇವೆಲ್ಲ ನಡೆಯುತ್ತಿರಲಿಲ್ಲ. ಈ ಎಲ್ಲಾ ಸಂಘರ್ಷ ನಡೆಯಲು ಕಾಂಗ್ರೆಸ್ ಕಾರಣ. ರಾಜ್ಯದಲ್ಲಿ ಕೋಮು ಗಲಭೆ ಹುಟ್ಟುಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಗಲುಗನಸು ಕಾಣುತ್ತಿದೆ. ಬಿಜೆಪಿ ಕೋಮುಗಲಭೆ ರಾಜಕಾರಣವನ್ನು ಯಾವತ್ತೂ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದರು.