ದಾವಣಗೆರೆ : ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಶಿಫಾರಸು ಮಾಡಿರುವ ಬಿಜೆಪಿ ಅಭ್ಯರ್ಥಿಯನ್ನ ಬದಲಾಯಿಸಿ ಪಕ್ಷಕ್ಕಾಗಿ ದುಡಿದವರಿಗೆ ಟಿಕೇಟ್ ನೀಡಬೇಕು ಎಂದು ಬಿಜೆಪಿ ಮುಖಂಡ ಜಯಪ್ರಕಾಶ್ ಕೊಂಡಜ್ಜಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದಿದ್ದೇವೆ. ಪಕ್ಷದ ವಿವಿಧ ಹುದ್ದೆಗಳಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಿದ್ದೇವೆ. ಈ ಹಿಂದೆ ನಡೆದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ರೂ ಆಗ ಹಿಂದೆ ಸರಿದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ಈ ಬಾರಿಯಾದ್ರೂ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಕೆಲ ತಿಂಗಳ ಹಿಂದೆ ಪಕ್ಷಕ್ಕೆ ಸ್ವಾರ್ಥದಿಂದ ಬಂದಿರುವವರಿಗೆ ಮಣೆ ಹಾಕಿ, ಚಿದಾನಂದ ಅವರ ಹೆಸರನ್ನ ಶಿಫಾರಸು ಮಾಡಿರುವುದು ನಮಗೆ ಅತ್ಯಂತ ನೋವು ತಂದಿದೆ. ಅಲ್ಲದೇ ಚಿದಾನಂದರನ್ನು ಅಧಿಕೃತವಾಗಿ ಅಭ್ಯರ್ಥಿ ಎಂದು ಘೋಷಿಸುವ ಮೊದಲೇ ಭಿತ್ತಿ ಪತ್ರಗಳು, ಬ್ಯಾನರ್ಗಳು ಹಾಗೂ ಕರಪತ್ರಗಳನ್ನ ಮುದ್ರಿಸಿ, ತಾವೇ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿರುವುದು ರಾಜ್ಯ ಬಿಜೆಪಿ ಘಟಕಕ್ಕೆ ಅವಮಾನಿಸಿದಂತಾಗುತ್ತದೆ. ಆದ್ದರಿಂದ ಕೂಡಲೇ ಪಕ್ಷದ ಹಿತದೃಷ್ಟಿಯಿಂದ ಅವರ ಶಿಫಾರಸು ಹಿಂಪಡೆದು ಪಕ್ಷದ ನಿಷ್ಠಾವಂತರಾಗಿರುವ ನಮ್ಮಲ್ಲಿ ಯಾರಿಗಾದ್ರೂ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.