ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅನ್ನ ಭಾಗ್ಯಕ್ಕೆ ಕನ್ನ ಹಾಕಿದ್ದರು. ಎಸ್ಸಿ ಎಸ್ಟಿ ಮಕ್ಕಳ ಹಾಸಿಗೆ ದಿಂಬಿನಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಜರುಗಿದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗ ಅಂತಾ ಅಧಿಕಾರ ನೀಡಲಾಗಿತ್ತು. ಆದರೆ ಅವರು ಮಾಡಿದ್ದು ಮಾತ್ರ ಆ ಜನಾಂಗಕ್ಕೆ ದ್ರೋಹ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ಎಸ್ಸಿ ಎಸ್ಟಿಗಳಿಗೆ ಜಮೀನು ಇಲ್ಲಾ, ಅವರು ದುಡಿಮೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ. ಪ.ಜಾ, ಪ.ಪಂ ಅವರು ಸ್ವಾಭಿಮಾನದ ಬದುಕು ನಡೆಸಬೇಕು ಎಂಬುದು ಬಿಜೆಪಿ ಗುರಿ ಎಂದು ಹೇಳಿದರು.
ನಮ್ಮದು ಡಬಲ್ ಇಂಜಿನ್ ಸರ್ಕಾರ: ಜಗಳೂರಿಗೆ ನೀರು ಬೇಕು ಎಂದು ಇಲ್ಲಿನ ಜನ ಹೋರಾಟ ಮಾಡಿದ್ದರು. ಆದರೆ ಕಾಂಗ್ರೆಸ್ ಕ್ಯಾರೇ ಎನ್ನಲ್ಲಿಲ್ಲ. ಜಗಳೂರು ಕೇಂದ್ರದ 57 ಕೆರೆಗಳಿಗೆ ನೀರು ತುಂಬಿಸಲು 650 ಕೋಟಿ ರೂಪಾಯಿಯನ್ನು ಯಡಿಯೂರಪ್ಪನವರು ನೀಡಿದ್ದರು. ಈಗ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 45 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆ ನೀಡಿದ್ದು ನಮ್ಮ ಸರ್ಕಾರ. 154 ಗ್ರಾಮಗಳಿಗೆ ಮನೆ ಮನೆ ನೀರು ಕೊಡುವ ಯೋಜನೆ ಮಾಡಿದ್ದೇವೆ. ಐದು ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ವಿವೇಕಾನಂದ ಹೆಸರಿನಲ್ಲಿ ಯುವಕರಿಗೆ ಯೋಜನೆ ಕೂಡ ನೀಡಿದ್ದೇವೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆ. 2023ರ ರಲ್ಲೂ ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ಜನ ಹೇಳುತ್ತಿದ್ದಾರೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಹಾಲುಮತ ಸಮುದಾಯದ ಕುರಿಗಾಯಿ ಸಂಘಕ್ಕೆ ಧನ ಸಹಾಯ: ಹಾಲುಮತ ಜನಕ್ಕೆ ಹಾಗು ಕುರಿಗಾರ ಸಂಘಕ್ಕೆ ಲಕ್ಷಾಂತರ ರೂಪಾಯಿ ಧನ ಸಹಾಯ ಮಾಡಲಾಗುತ್ತಿದೆ. ಹಿಂದುಳಿದ ಬಡಿಗ ಕಂಬಾರ ಜನಾಂಗಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ತುಮಕೂರು ಮತ್ತು ದಾವಣಗೆರೆ ರೈಲ್ವೆ ಲೈನ್ಗೆ ಯೋಜನೆ ರೂಪಿಸಲಾಗಿದೆ. ದಾವಣಗೆರೆಯಲ್ಲಿ ಜಮೀನು ಕೊಟ್ಟರೆ ವಿಮಾನ ನಿಲ್ದಾಣ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ನ ಒಬ್ಬರು ಸಿಎಂ ಆಗುವ ತಿರುಕನ ಕನಸು ಕಾಣ್ತಿದ್ದಾರೆ: ಸಿದ್ದರಾಮಯ್ಯಗೆ ಬಿಎಸ್ವೈ ಟಾಂಗ್