ದಾವಣಗೆರೆ: ವಿಧಾನಸಭಾ ಚುನಾವಣೆ ವೇಳೆ ಜಗಳೂರು ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮತ್ತು ಅವರ ಮೂರು ಜನ ಮಕ್ಕಳನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಹಿರಿಯ ಬಿಜೆಪಿ ಮುಖಂಡ, ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಹಾಗೂ ಅವರ ಮೂರು ಜನ ಪುತ್ರರಾದ ಟಿ ಜಿ ಅರವಿಂದ ಕುಮಾರ್, ಟಿ ಜಿ ಪವನ ಕುಮಾರ್, ಟಿ ಜಿ ರವಿಕುಮಾರ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಈ ನಾಲ್ವರ ವಿರುದ್ಧ ಕೇಳಿಬಂದಿತ್ತು. ಜಗಳೂರು ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್ ವಿ ರಾಮಚಂದ್ರ ಸೋಲಿಗೆ ಕಾರಣರಾಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಉಚ್ಛಾಟನೆ ಮಾಡಲಾಗಿದೆ. ಉಚ್ಛಾಟಿತರಾದ ಗುರುಸಿದ್ದನಗೌಡ ಈ ಹಿಂದೆ ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದು, ಅವರು ಚೆಕ್ ಡ್ಯಾಂ ಗೌಡ್ರು ಎಂದೇ ಇಡೀ ಜಗಳೂರು ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು. ಅಲ್ಲದೆ ದಾವಣಗೆರೆ ವಾಜಪೇಯಿ ಎಂದೇ ಪ್ರಸಿದ್ಧಿ ಗಳಿಸಿದ್ದರು.
ಲೋಕಸಭೆ ಟಿಕೆಟ್ ಆಕಾಂಕ್ಷಿಗೆ ಶಾಕ್! : ಮಾಜಿ ಶಾಸಕ ಗುರುಸಿದ್ದನ ಗೌಡ ಅವರ ಸುಪುತ್ರ ಡಾ. ಟಿ ಜಿ ರವಿಕುಮಾರ್ ಅವರು ಬರುವ ಲೋಕಸಭೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅದರೆ ಅವರು ಸೇರಿ ಟಿ ಜಿ ಅರವಿಂದ ಕುಮಾರ್, ಟಿ ಜಿ ಪವನ ಕುಮಾರ್, ಮಾಜಿ ಶಾಸಕ ಗುರುಸಿದ್ದನಗೌಡ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಪಕ್ಷದಿಂದ ಪ್ರಕಟಣೆ ಹೊರಡಿಸಲಾಗಿದೆ.
ಬಿಜೆಪಿ ಹೊರಡಿಸಿರುವ ಪ್ರಕಟಣೆಯಲ್ಲಿ ಏನಿದೆ? : ಜಗಳೂರಿನ ಮಾಜಿ ಶಾಸಕರು ಬಿಜೆಪಿಯ ಮುಖಂಡರಾದ ಗುರುಸಿದ್ದನಗೌಡ ಮತ್ತು ಅವರ ಪುತ್ರರಾದ ಟಿ ಜಿ ಅರವಿಂದ ಕುಮಾರ್, ಟಿ ಜಿ ಪವನ ಕುಮಾರ್, ಡಾ ಟಿ ಜಿ ರವಿಕುಮಾರ್ ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣ ಮತ್ತು ನಿರಂತರ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಕಾರಣ ರಾಜ್ಯ ಬಿಜೆಪಿ ಶಿಸ್ತು ಪಾಲನ ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸೂಚನೆ ಮೇರೆಗೆ ಅವರನ್ನು ಮುಂದಿನ ಆರು ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾ -ಪ್ರಧಾನ, ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : 'ಎಡವುತ್ತಿರುವ ಕಾಂಗ್ರೆಸ್ ಸರ್ಕಾರ, ವಿಧಾನಸಭೆಯಂತೆ ಲೋಕಸಭೆಯಲ್ಲಿ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ': ಬಿ ವೈ ವಿಜಯೇಂದ್ರ