ದಾವಣಗೆರೆ: ಮಂಡ್ಯದಲ್ಲಿ ಕಾವೇರಿ ಕಾವು ಜೋರಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇಂದು ರೈತರು ಬಂದ್ ಮಾಡಿದರು. ಇತ್ತ ದಾವಣಗೆರೆಯಲ್ಲೂ ಕೂಡ ಭದ್ರಾ ಕಿಚ್ಚು ಕಾವೇರಿದ್ದು, ನೀರು ಹರಿಸುವಂತೆ ಭತ್ತ ನಾಟಿ ಮಾಡಿರುವ ರೈತರು ಕಳೆದ ಒಂದು ವಾರದಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಭದ್ರಾ ನೀರಿಗಾಗಿ ಬೀದಿಗಿಳಿದ ರೈತರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಭದ್ರಾ ನೀರು ಹರಿಸದೇ ಇರುವುದರ ಹಿನ್ನೆಲೆ ಭಾರತೀಯ ರೈತ ಒಕ್ಕೂಟದಿಂದ ಸೋಮವಾರ ದಾವಣಗೆರೆ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದೆ. ನಾಳೆ ಭಾನುವಾರ ಸಂಜೆ 6 ಗಂಟೆಯೊಳಗೆ ನೀರು ಬಿಡಲು ಕಾಡಾ ಲಿಖಿತ ಆದೇಶ ನೀಡಿದ್ರೇ ಮಾತ್ರ ಸೋಮವಾರ ಜಿಲ್ಲೆಯಾದ್ಯಂತ ಬಂದ್ ಹಿಂಪಡೆಯಲಾಗುವುದು. ಲಿಖಿತ ಆದೇಶ ಕೊಡದಿದ್ದರೆ ಬಂದ್ ಮಾಡುವುದು ಖಚಿತ ಎಂದು ರೈತ ಮುಖಂಡರು ಎಚ್ಚರಿಕೆ ರವಾನಿಸಿದ್ದಾರೆ.
ಭದ್ರಾ ಕಾಡಾ ಸಮಿತಿ ವಿರುದ್ಧ ರೈತರ ಆಕ್ರೋಶ: ಭದ್ರಾ ನೀರು ನೆಚ್ಚಿಕೊಂಡು ಸಾವಿರಾರು ರೈತರು 1.40 ಲಕ್ಷ ಎಕರೆಯಲ್ಲಿ ರೈತರು ಭತ್ತದ ನಾಟಿ ಮಾಡಿದ್ದಾರೆ. ಸದ್ಯ ರೈತರು ನೀರಿಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಭದ್ರಾ ಕಾಡಾ ಸಮಿತಿ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಬಿಡುತ್ತೇವೆ ಎಂದು ಹೇಳಿದೆ. ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಹರಿಸಿದರೆ, ಟೇಲ್ ಎಂಡ್ ರೈತರಿಗೆ ನೀರು ಸಿಗದೆ ಇರುವುದು ಚಿಂತೆಗೀಡು ಮಾಡಿದೆ. ಭದ್ರಾ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದಕ್ಕೆ ಭತ್ತ ಒಣಗುತ್ತಿದೆ ಎಂದು ರೈತರು ಕಿಡಿಕಾರಿದರು.
1 ಲಕ್ಷದ 40 ಸಾವಿರ ಎಕರೆಯಲ್ಲಿ ಭತ್ತದ ಬೆಳೆ ಬೆಳೆಯುತ್ತಿದ್ದು, 4 ಲಕ್ಷ 20 ಸಾವಿರ ಮೆಟ್ರಿಕ್ ಟನ್ ಭತ್ತ ಹಾಗೂ 2 ಲಕ್ಷ 55 ಸಾವಿರ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನೆಯಾಗುತ್ತದೆ. ಆದರೆ, ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನಿಲ್ಲಿಸಿದ ಹಿನ್ನೆಲೆ ರೈತರಿಗೆ ದಿಕ್ಕು ತೋಚದಂತಾಗಿದೆ.
ದಾವಣಗೆರೆ ಜಿಲ್ಲೆ ಬಂದ್ ಯಶಸ್ವಿಗೊಳಿಸಲು ಮನವಿ: ಭಾರತೀಯ ರೈತ ಒಕ್ಕೂಟದ ಸಂಘಟನೆಯ ರೈತ ಪುನೀತ್ ಮಾತನಾಡಿ, ''ಸೋಮವಾರ ದಾವಣಗೆರೆ ಜಿಲ್ಲೆ ಬಂದ್ಗೆ ಕರೆ ನೀಡಿದ್ದೇವೆ. ಸಂಘಟನೆಗಳು, ದಲ್ಲಾಳಿ ಅಂಗಡಿಯವರು, ಕಿರಾಣಿ ಅಂಗಡಿಯವರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಜವಳಿ ವ್ಯಾಪಾರಿಗಳು, ರೈಸ್ ಮಿಲ್ ಮಾಲೀಕರು ಹಾಗೂ ಎಲ್ಲಾ ಅಂಗಡಿಗಳ ವ್ಯಾಪಾರಿಗಳು ಬಂದ್ಗೆ ಬೆಂಬಲ ನೀಡಿ ಯಶಸ್ವಿಗೊಳಿಸಬೇಕು ಎಂದು ಅವರು, ಉಗ್ರವಾದ ಹೋರಾಟ ಮಾಡ್ತೇವೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ರೈತ ಒಕ್ಕೂಟ ಮುಖಂಡ ಬಸವರಾಜಪ್ಪ ಮಾತನಾಡಿ, ''7 ಟಿಎಂ ಕುಡಿಯುವ ನೀರು, 2.5 ಆವಿಯಾಗುವ ನೀರು ಹೊರತು ಪಡಿಸಿ, ಬೆಳೆಗೆ ಬೇಕಾಗಿರುವುದು 12.44 ಟಿಎಂಸಿ ನೀರು ಬೇಕಿದೆ. ಡ್ಯಾಂನಲ್ಲಿ ಕುಡಿಯುವ ನೀರು ಸೇರಿ 17.05 ಉಳಿಯಲಿದೆ. ನಮ್ಮ ನೀರು ನಮಗೆ ಕೊಡಲಿ, ಕಾಡಾದವರು ನಮ್ಮನ್ನು ಕಾಡುತ್ತಲೇ ಬರುತ್ತಿದ್ದಾರೆ. ಭಾನುವಾರದ ಸಂಜೆ ಒಳಗೆ ನೀರು ಬಿಡುವ ಆದೇಶ ಬಂದ್ರೇ ಬಂದ್ ಕೈ ಬಿಡುತ್ತೇವೆ. ಇಲ್ಲದೇ ಹೋದರೆ ಬಂದ್ ಮಾಡ್ತೇವೆ. ಇನ್ನು ಶಾಲಾ- ಕಾಲೇಜುಗಳಿಗೆ ತೊಂದರೆ ಕೊಡುವುದಿಲ್ಲ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳು ರಾಜಕೀಯ ಆಯಾಮ ಕಲ್ಪಿಸುತ್ತಿವೆ: ಡಿ ಕೆ ಶಿವಕುಮಾರ್