ಹರಿಹರ: ಹರಿಹರ ತಾಲೂಕಿನ ಕೊಂಡಜ್ಜಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಶಾಸಕ ಎಸ್. ರಾಮಪ್ಪ ಕೆರೆಗೆ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ರಾಮಪ್ಪ, ತಾಲೂಕಿನ ಕೊಂಡಜ್ಜಿ ಕೆರೆಯು ಕಳೆದ ಐದು ವರ್ಷಗಳಿಂದ ಭೀಕರ ಬರಗಾಲಕ್ಕೆ ಒಳಗಾಗಿ ತುಂಬಿರಲಿಲ್ಲ. ಈ ವರ್ಷ ಉತ್ತಮ ಮಳೆಯಾದ ಕಾರಣ ಈ ಕೆರೆ ತುಂಬಿದ್ದು, ರೈತರಲ್ಲಿ ಸಂತಸ ಮೂಡಿದೆ. ಇದೇ ರೀತಿ ತಾಲೂಕಿನ ಕೊಮರನಹಳ್ಳಿ ಕೆರೆ, ಅಗಸನಕಟ್ಟೆ ಕೆರೆ, ಚಂದಪ್ಪನ ಕೆರೆ ಹಾಗೂ ಉಳಿದ ಎಲ್ಲಾ ಕೆರೆಗಳನ್ನು ತುಂಬಿಸಲು 60 ಕೋಟಿ ರೂಪಾಯಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಶೀಘ್ರದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ನಾನು ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೆಚ್.ಹೆಚ್. ಬಸವರಾಜ್ ಮಾತನಾಡಿ, ಹಳ್ಳಿಗಳಲ್ಲಿ ಕೆರೆಗಳು ಉಳಿದರೆ ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಇದರಿಂದ ರೈತರು ಖುಷಿಯಿಂದ ಬೆಳೆ ಬೆಳೆಯುತ್ತಾರೆ. ತಾಲೂಕಿನಲ್ಲಿ ಹೊತ್ತುವರಿಯಾಗಿರುವ ಕೆರೆಗಳನ್ನು ಸರ್ವೇ ಮಾಡಿಸಿ, ಕೆರೆಗಳನ್ನು ಅಭಿವೃದ್ಧಿ ಪಡಿಸಲು ಶಾಸಕರು ಮುಂದಾಗಲಿ ಎಂದರು. ಇನ್ನು, ಎಂ.ಎಲ್.ಸಿ ಮೋಹನ್ ಕೊಂಡಜ್ಜಿ ಮಾತನಾಡಿ, ನನ್ನ ವಿಶೇಷ ಅನುದಾನದಲ್ಲಿ ಕೊಂಡಜ್ಜಿಯ ಸ್ಕೌಟ್ ಆ್ಯಂಡ್ ಗೈಡ್ಸ್ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದೇನೆ. ನನ್ನ ಅಣ್ಣನಾದ ಕೊಂಡಜ್ಜಿ ಬಸಪ್ಪ ಅವರು ಈ ಸ್ಕೌಟ್ ಆ್ಯಂಡ್ ಗೈಡ್ಸ್ ಸ್ಥಾಪಿಸಿ, ಅದಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟಿದ್ದರು. ಅವರ ಸಾಧನೆ ಅನನ್ಯ ಎಂದರು.
ಈ ವೇಳೆ ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಮ್ಮ, ಮುಖಂಡರಾದ ನಿಕಿಲ್ ಕೊಂಡಜ್ಜಿ, ನಾಗರಾಜ್, ತಿಪ್ಪೇಶ್, ಉಮ್ಮಣ್ಣ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.