ದಾವಣಗೆರೆ: ಕಣಜ ಹುಳು ದಾವಣಗೆರೆ ರೈತರ ನಿದ್ದೆ ಗೆಡಿಸಿದೆ. ಈ ಹುಳುಗಳು ಮಕ್ಕಳು, ಮಹಿಳೆಯರು, ರೈತರ ಮನದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಈ ಕೀಟ ಡೇಂಜರ್ ಆಗಿದ್ದು, ಒಟ್ಟಿಗೆ ನೂರಾರು ಕೀಟಗಳು ವ್ಯಕ್ತಿಯ ಮೇಲೆ ದಾಳಿ ಮಾಡಿದ್ರೇ ಆತ ಉಳಿಯುವುದು ಅನುಮಾನವಾಗಿದೆ. ಇದರಿಂದ ಈ ಭಾಗದ ರೈತರು ತಮ್ಮ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವುದು ತಿಳಿದು ಬಂದಿದೆ.
ಕಾಡು ಜೀರಿಗೆ ಸೇರಿದಂತೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಈ ಕಣಜ ಹುಳು ಗುಬ್ಬಿ ಗೂಡು ಕಟ್ಟುವಂತೆ ಗೂಡು ಕಟ್ಟುವ ಮೂಲಕ ತನ್ನ ವಾಸ ಸ್ಥಳ ಮಾಡಿಕೊಳ್ಳುತ್ತದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಬಳಿ ಹರೋ ಸಾಗರದ, ಕಂಸಾಗರ, ಎಲೋದಹಳ್ಳಿಯ ಭಾಗದಲ್ಲಿ ಈ ಹುಳುಗಳು ಗೂಡು ಕಟ್ಟಿದೆ. ಹರೋ ಸಾಗರದ ಜನ ನಿತ್ಯ ಭಯದಲ್ಲೇ ಕಾಲ ಕಳೆಯುತ್ತಿದ್ದಾರಂತೆ. ಕಾರಣ ರಾಜ್ಯ ಹೆದ್ದಾರಿಯ ಮರ ಗಿಡಗಳಿಗೆ ಗೂಡು ಕಟ್ಟಿರುವ ಈ ಕಣಜ ಕೀಟ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ಹೇಳ್ತಿದ್ದಾರೆ.
ಕಣಜ ಹುಳುಗಳು ಹರೋ ಸಾಗರದ ಹಾಲಸ್ವಾಮಿ ಎಂಬವರ ಮೇಲೆ ಏಕಾಏಕಿ ದಾಳಿ ಮಾಡಿದೆ. ಪರಿಣಾಮ, ಕಚ್ಚಿದ ಸ್ಥಳದಲ್ಲಿ ಊತವಾಗಿ, ವಿಪರೀತ ಉರಿ ಆಗುತ್ತಿತ್ತಂತೆ. ಇನ್ನು ಹಾಲಸ್ವಾಮೀಯವರು ನಾಲ್ಕು ದಿನ ಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕವೂ ಕಣ್ಣೀನ ಕೆಳಭಾಗದಲ್ಲಿ ಕಪ್ಪುಗಟ್ಟಿದೆ ಎನ್ನಲಾಗಿದೆ. ಇನ್ನು ಮಕ್ಕಳು ಮಹಿಳೆಯರಿಗೆ ಕೀಟಗಳು ತೊಂದರೆ ಕೊಡ್ತಿವೆ. ವಿಷಕಾರಿ ಹುಳು ಆಗಿದ್ದರಿಂದ ಯಲೋದಹಳ್ಳಿ, ದಾಗಿನಕಟ್ಟೆ, ಬಸವಾಪಟ್ಟಣ, ಕಂಸಾಗರ, ಸಂಗಾಹಳ್ಳಿ, ಬೆಳಲಗೆರೆ ಸೇರಿದಂತೆ ಹೀಗೆ ಹತ್ತು ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಹೀಗಾಗಿ ಪಂಚಾಯತಿಯವರು ಈ ಹುಳುಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದು ಹೆಚ್ಚಾಗಿ ಅರಣ್ಯದಲ್ಲಿ ಇರುವ ಹುಳು. ಇತ್ತೀಚಿಗೆ ಅಡಕೆ ತೋಟ, ಗ್ರಾಮಗಳ ಸುತ್ತಿಲಿನ ದೊಡ್ಡ ಮರಗಳ ಬಳಿ ಬಂದು ಆಶ್ರಯ ಪಡೆದುಕೊಂಡಿವೆ. ಇದನ್ನ ನೋಡಿದ್ರೆ ಸಾಕು ಜನ ತಲೆ ಮೇಲೆ ಟಾವೆಲ್ ಹಾಕಿಕೊಂಡು ಭಯದಿಂದ ಹೋಗುತ್ತಾರೆ. ಈ ಹಿಂದೆ ಇದರ ಬಗ್ಗೆ ಜನರಿಗೆ ಗೊತ್ತಿತ್ತು. ಆದರೆ ಇದು ಕಡಿದರೇ ಸಾವನ್ನಪ್ಪುತ್ತಾರೆ ಎಂಬುದು ಮಾತ್ರ ಬಹುತೇಕರಿಗೆ ಗೊತ್ತಿಲ್ಲ.
ಇದೇ ವೇಳೆ ಪ್ರತಿಕ್ರಿಯಿಸಿದ ನಾಗರಾಜ್ ಅವರು ಈ ಹುಳುವು ತೋಟ, ಮರಗಳಲ್ಲಿ ಗೂಡು ಕಟ್ಟುತ್ತವೆ. ತೋಟಕ್ಕೆ ತೆರಳಲು ಭಯವಾಗುತ್ತದೆ. ಒಬ್ಬ ವ್ಯಕ್ತಿಗೆ ಒಂದು ಹುಳು ಕಡಿದರೇ ಉರಿ, ಮೈ ಬಾತುಕೊಳ್ಳುವುದು, ವಿಪರೀತ ಜ್ವರ ಬರುವುದು ಸಾಮಾನ್ಯ. ಆದರೆ ಏಳರಿಂದ ಎಂಟು ಹುಳು ಕಡಿದರೇ ಸಾವು ಖಚಿತ. ಯಾವುದೇ ರೀತಿಯ ಚಿಕಿತ್ಸೆ ನೀಡಿದ್ರು ಬದುಕಲು ಸಾಧ್ಯವಿಲ್ಲ ಅಂತ ವಿಷಕಾರಿ ಹುಳು ಇದಾಗಿದೆ ಎಂದು ಗ್ರಾಮಸ್ಥ ನಾಗರಾಜ್ ಮಾಹಿತಿ ಹಂಚಿಕೊಂಡರು.
ಕೀಟದ ಬಗ್ಗೆ ಸೂಕ್ಷ್ಮ ಜೀವಶಾಸ್ತ್ರದ ಪ್ರಾಧ್ಯಾಪಕರು ಮಾತು: ಈ ಹುಳಗಳ ಬಗ್ಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಸೂಕ್ಷ್ಮ ಜೀವಶಾಸ್ತ್ರದ ಪ್ರಾಧ್ಯಾಪಕರಾದ ಶಿಶುಪಾಲ್ ಅವರು, ಕಣಜ ಹುಳುವನ್ನು ಆಂಗ್ಲ ಭಾಷೆಯಲ್ಲಿ ಹಾರ್ನೆಸ್ಟ್ ಎಂದು ಕರೆಯಲಾಗುತ್ತದೆ. ಇವು ಹೆಚ್ಚು ಯೂರೋಪ್, ರಷ್ಯಾ, ಅಮೆರಿಕ, ಈಶಾನ್ಯ ಏಷ್ಯಾದಲ್ಲಿ ಕಂಡುಬರುತ್ತವೆ. ಇವು ಕಡಿದರೆ ವಿಪರೀತ ಊತ ಹಾಗು ಬಾವು ಬರುತ್ತದೆ.
ಒಂದು ಎರಡು ಕೀಟ ಕಚ್ಚಿದ್ರೇ ವ್ಯಕ್ತಿಗೆ ಏನೂ ಆಗುವುದಿಲ್ಲ. ಅದ್ರೇ ನೂರಾರು ಕೀಟಗಳು ದಾಳಿ ಮಾಡಿದ್ರೇ ಮನುಷ್ಯ ಬದುಕುಳಿಯುವುದು ಕಡಿಮೆ. ವಿಶೇಷ ಅಂದ್ರೇ ಈ ಕೀಟಗಳು ಕಚ್ಚಿದ್ರೇ ವಿಷಕಾರಿ ಮುಳ್ಳನ್ನು ಬಿಡುವುದಿಲ್ಲ. ಇವುಗಳಿಗೆ ತೊಂದರೆ ಮಾಡಿದರೇ ತಕ್ಷಣ ಅಲರ್ಟ್ ಆಗುವ ಏಕೈಕ ಕೀಟ ಇದಾಗಿದೆ. ವ್ಯಕ್ತಿಗೆ ಕಚ್ಚಿದರೇ ಜ್ವರ, ವಾಂತಿ, ತಲೆ ಸುತ್ತು, ತಲೆ ನೋವು ಕಾಣಿಸಿಕೊಳ್ಳುತ್ತದೆ ಎಂದು ಶಿಶುಪಾಲ್ ಅವರು ಹೇಳಿದ್ದಾರೆ.
ಕಾಡು ಜೀರಿಗೆ ಹುಳು ಅಥವಾ ಕಾಡುಜೇನು, ಕಣಜ ಹುಳು ಎಂಬ ಹೆಸರುಗಳಿಂದ ಗ್ರಾಮೀಣ ಪ್ರದೇಶದ ಜನ ಕರೆಯುತ್ತಾರೆ. ಅರಣ್ಯ ಇಲಾಖೆಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದ್ರೆ ಹಳ್ಳಿಯ ಜನರಿಗೆ ಮಾತ್ರ ಭೀತಿ ಹುಟ್ಟಿಸಿದ್ದು ಮರೆಯುವಂತಿಲ್ಲ. ಕೆಲ ಕಡೆ ವಿದ್ಯುತ್ ಕಂಬಕ್ಕೂ ಇಂತಹ ಗೂಡುಗಳಿದ್ದವು. ಜನ ಅವುಗಳನ್ನಸುಟ್ಟು ಹಾಕಿದ್ದಾರೆ. ಮೇಲಾಗಿ ಇದು ರಾತ್ರಿ ವೇಳೆ ಹೆಚ್ಚು ಜಾಗರೂಕವಾಗಿರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅರಣ್ಯದಲ್ಲಿ ಇರುವ ಈ ಹುಳು ಕಾಡು ಪ್ರಾಣಿಗಳಂತೆ ನಾಡಿನ ಕಡೆ ಲಗ್ಗೆ ಇಟ್ಟಿದ್ದು, ನಿಜಕ್ಕೂ ಆತಂಕದ ವಿಚಾರ. ಇದರ ಬಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆ ಜನ ಜಾಗೃತಿ ಮಾಡಬೇಕಿದೆ.
ಓದಿ: ಹೈದರಾಬಾದ್ನ ಗೋಲ್ಡ್ ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು: ಹೀಗಿದೆ ಇದರ ವಿಶೇಷತೆ...