ದಾವಣಗೆರೆ: ಶ್ರಾವಣ ಮಾಸ ಹಾಗು ಇನ್ನಿತರೆ ಹಬ್ಬ-ಹರಿದಿನಗಳಲ್ಲಿ ಬಾಳೆ ಹಣ್ಣಿನ ದರ ಗಗನಕ್ಕೇರುತ್ತದೆ. ಆದರೆ ಇದೀಗ ಚಳಿಗಾಲವಿರುವ ಕಾರಣಕ್ಕೆ ಹೆಚ್ಚು ಫಸಲು ಬಂದಿದ್ದು, ಬಾಳೆ ದರ ದಿಢೀರ್ ಇಳಿಕೆ ಕಂಡಿದೆ. 30-40 ರೂಪಾಯಿಗೆ ಡಜನ್ನಂತೆ ಏಲಕ್ಕಿ ಬಾಳೆ ಮಾರಾಟವಾಗುತ್ತಿದೆ. ಪಚ್ ಬಾಳೆ ಡಜನ್‌ಗೆ 20-25 ರೂಪಾಯಿಗೆ ಬಿಕರಿಯಾಗುತ್ತಿದೆ. ರೈತರಿಗೆ ಮಾತ್ರ ಕೇವಲ 25 ರೂಪಾಯಿಯಂತೆ ದರ ನಿಗದಿಪಡಿಸಿ ದಲ್ಲಾಳಿಗಳು ಖರೀದಿಸುತ್ತಿದ್ದಾರೆ.
ಶ್ರಾವಣ ಹಾಗು ರಂಜಾನ್ ಮಾಸಗಳಲ್ಲಿ ಏರಿಕೆಯಾಗಿದ್ದ ಬಾಳೆ ಬೆಲೆ ಇಳಿಮುಖವಾಗಿದೆ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ದಲ್ಲಾಳಿಗಳು ಮಾರಾಟ ಮಾಡುತ್ತಿದ್ದಾರೆ. ಆದರೆ ಎಪಿಎಂಸಿಯಲ್ಲಿ ದರ ಕಡಿಮೆ ಇದ್ದರೂ ಗ್ರಾಹಕರು ಅತ್ತ ಕಡೆ ಮುಖ ಮಾಡುತ್ತಿಲ್ಲ.
"ದಾವಣಗೆರೆಯಲ್ಲಿ ಹೆಚ್ಚು ಚಳಿ ಇರುವುದರಿಂದ ಫಸಲು ಕೂಡ ಹೆಚ್ಚಾಗಿದೆ. ಹೀಗಾಗಿ ಯಥೇಚ್ಛವಾಗಿ ಬಾಳೆ ಮಾರುಕಟ್ಟೆಗೆ ಬರುತ್ತಿದೆ. ಬೆಲೆ ಇಳಿಮುಖವಾಗಿದೆ" ಎಂಬುದು ದಲ್ಲಾಳಿಗಳ ಮಾತು.
ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಕೃಷಿ ಮಾಡುತ್ತಿದ್ದಾರೆ. ಜಗಳೂರು, ಚಿತ್ರದುರ್ಗ, ಚನ್ನಗಿರಿ, ಮಾಯಕೊಂಡ, ಹರಿಹರ ಹೀಗೆ ನಾನಾ ಕಡೆಗಳಲ್ಲಿ ಬಾಳೆ ಬೆಳೆದು ಮಾರಾಟ ಮಾಡಲಾಗುತ್ತದೆ. ಈ ಹಿಂದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ದಾವಣಗೆರೆ ಬಾಳೆಗೆ ಹೆಚ್ಚು ಬೇಡಿಕೆ ಇತ್ತು. ಇದೀಗ ಆ ಭಾಗದಲ್ಲಿ ರೈತರು ಹೆಚ್ಚು ಬಾಳೆ ಬೆಳೆಯುತ್ತಿರುವುದರಿಂದ ರಫ್ತು ನಿಂತಿದೆ. ದಲ್ಲಾಳಿಗಳು ರೈತರ ಬಳಿ ಟನ್‌ಗಟ್ಟಲೆ (ಟನ್‌ಗೆ 2,500) ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಅವುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎನ್ನುವುದು ರೈತರ ದೂರು.
ಬಾಳೆ ಮಾರಾಟಗಾರರ ಪ್ರತಿಕ್ರಿಯೆ: ಬಾಳೆ ಮಾರಾಟಗಾರರದ ಸುರೇಶ್ 'ಈಟಿವಿ ಭಾರತ್'ನೊಂದಿಗೆ ಮಾತನಾಡಿ, "ಹೆಚ್ಚಿನ ಬಾಳೆ ಫಸಲು ಬರುತ್ತಿದೆ. ಹಾಗಾಗಿ, ದರ ಇಳಿದಿದೆ. ಮಹಾರಾಷ್ಟ್ರ ಆಂಧ್ರಕ್ಕೆ ಹೋಗುವ ಬಾಳೆ ಬಂದ್ ಆಗಿದೆ. ಅಲ್ಲಿಯ ಬಾಳೆ ದಾವಣಗೆರೆಗೆ ಬರುತ್ತಿದೆ. ನಾವು 25-30 ರೂಪಾಯಿಗೆ ಕೆ.ಜಿ ಪಚ್ ಬಾಳೆ ಖರೀದಿ ಮಾಡುತ್ತಿದ್ದು, ಅದನ್ನು ಹಣ್ಣು ಮಾಡಿ ಕೆ.ಜಿಗೆ 40 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ. ನಮಗೆ 5-10 ರೂಪಾಯಿ ಲಾಭ ಸಿಗುತ್ತದೆ. ಜಗಳೂರು, ಚಿತ್ರದುರ್ಗ, ಚನ್ನಗಿರಿ, ಮಾಯಕೊಂಡ, ಹರಿಹರ ಹೀಗೆ ವಿವಿಧೆಡೆಯಿಂದ ಬಾಳೆ ದಾವಣಗೆರೆ ಎಪಿಎಂಸಿಗೆ ಬರುತ್ತದೆ" ಎಂದರು.
ಇದನ್ನೂ ಓದಿ: ಚಿಕ್ಕಮಗಳೂರು: 8 ದಿನಗಳ ಅಂತರದಲ್ಲಿ 2 ಕರುಗಳಿಗೆ ಜನ್ಮ ನೀಡಿದ ಎಮ್ಮೆ