ದಾವಣಗೆರೆ: ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ಗೆ ನ್ಯಾಯಲಯ ಜಾಮೀನು ನಿರಾಕರಿಸಿದೆ. ಜಾಮೀನು ಕೋರಿ ರೇಖಾ ಕೋಟೆಗೌಡರ್ ದಾವಣಗೆರೆ ಜಿಲ್ಲಾ ಸೆಷನ್ಸ್ ಹಾಗೂ ವಿಶೇಷ ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಅವರಿದ್ದ ನ್ಯಾಯಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿಯಾಗಿರುವ ರೇಖಾ ಕೋಟೆಗೌಡರ್ ಪೋಕ್ಸೋ ಪ್ರಕರಣದ ಆರೋಪಿಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಪೋಕ್ಸೋ ಪ್ರಕರಣದ ಆರೋಪಿ ಮದನ್ ಎಂಬಾತಗೆ ಪ್ರಕರಣದಲ್ಲಿ ಸಹಾಯ ಮಾಡಲು ರೇಖಾ ಕೋಟೆ ಗೌಡರ್ ಮೂರು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕೆಲ ದಿನಗಳ ಹಿಂದೆ ಒಂದು ಲಕ್ಷ 13 ಸಾವಿರ ರೂಪಾಯಿ ಪಡೆದಿದ್ದ ಅಭಿಯೋಜಕಿ, ಉಳಿದ 1.87 ಲಕ್ಷ ಹಣವನ್ನು ಫೆ.05 ರಂದು ತಮ್ಮ ನಿವಾಸದಲ್ಲಿ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಮದನ್ ಪೋಕ್ಸೋ ಪ್ರಕರಣ ಆರೋಪಿಯಾಗಿದ್ದು, ಸಂತ್ರಸ್ತೆ ಪರ ವಾದ ಮಾಡಬೇಕಾದ ವಿಶೇಷ ಅಭಿಯೋಜಕಿ ರೇಖಾ ಕೋಟೆಗೌಡ, ಕೇಸ್ನಲ್ಲಿ ಆರೋಪಿಗೆ ಅನುಕೂಲ ಮಾಡುವುದಾಗಿ ಹೇಳಿ ಲಂಚ ಪಡೆದಿದ್ದರು. ಇನ್ನು ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ಗಳಾದ ಆಂಜನೇಯ, ರಾಷ್ಟ್ರಪತಿ ದಾಳಿ ನಡೆಸಿದ್ದರು.
ನಿಧಿಸಿಕ್ಕಿದೆ ಎಂದು ನಂಬಿಸಿ ರೈತನಿಗೆ ಪುಸಲಾಯಿಸಿ, ನಕಲಿ ಚಿನ್ನ ನೀಡಿ 7.5ಲಕ್ಷ ರೂಪಾಯಿ ವಂಚಿಸಿದ ಖದೀಮರು
ನಕಲಿ ಚಿನ್ನದ ಜಾಲಕ್ಕೆ ಬಿದ್ದ ರೈತ.. ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ರೈತನೋರ್ವ ನಕಲಿ ಚಿನ್ನದ ಜಾಲಕ್ಕೆ ಬಿದ್ದು 7.5ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಇಂದು ನಡೆದಿದೆ. ಅಥಣಿ ಮೂಲದ ಕಲ್ಲಪ್ಪ ಗುಂಜಿಗಾವಿ ಎಂಬ ರೈತ ವಂಚನೆಗೊಳಗಾಗಿದ್ದು, ಸಂತೋಷ ಎಂಬ ಹೆಸರಿನ ವ್ಯಕ್ತಿಯಿಂದ ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ನಕಲಿ ಚಿನ್ನ ಕೊಟ್ಟು ಖದೀಮರು ಪರಾರಿ.. ಚನ್ನಗಿರಿ ತಾಲೂಕಿನ ಸಂತೇಬೆನ್ನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿದ್ದನಮಠ ಕ್ರಾಸ್ ಬಳಿ ಘಟನೆ ನಡೆದಿದ್ದು, ನಕಲಿ ಚಿನ್ನ ನೀಡಿ ಹಣ ಪಡೆದು ವಂಚಿಸಲಾಗಿದೆ. ಮನೆಯ ಪಾಯ ತೆಗೆಯುವಾಗ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಕಡಿಮೆ ದರದಲ್ಲಿ ಚಿನ್ನ ಕೊಡುವುದಾಗಿ ರೈತ ಕಲ್ಲಪ್ಪ ಗುಂಜಿಗಾವಿ ಅವರಿಗೆ ಪುಸಲಾಯಿಸಿ 7.5 ಲಕ್ಷ ಹಣ ಪಡೆದು ಖದೀಮರು ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸಂತೋಷ್ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿ ರೈತ ಕಲ್ಲಪ್ಪನನ್ನು ಸಂತೇಬೆನ್ನೂರಿನ ಸಿದ್ದನಮಠ ಕ್ರಾಸ್ಗೆ ಕರೆಸಿಕೊಂಡಿದ್ದಾನೆ. ರೈತನ ಕೈಗೆ 250 ಗ್ರಾಂ ನಕಲಿ ಚಿನ್ನದ ತುಣುಕುಗಳನ್ನ ಕೊಟ್ಟು 7.5 ಲಕ್ಷ ಹಣ ಪಡೆದು ಪರಾರಿಯಾಗಿದ್ದಾನೆ.
ರೈತ ಕಲ್ಲಪ್ಪನಿಗೆ ಆರೋಪಿಗಳು 15 ಲಕ್ಷ ರೂಪಾಯಿ ತರುವಂತೆ ಹೇಳಿದ್ದರು, ಅದ್ರೇ ರೈತ 7.5 ಲಕ್ಷ ತಂದಿದ್ದು, ಅದನ್ನು ಕಳೆದುಕೊಂಡಿದ್ದಾನೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗೂಗಲ್ ಸಹಾಯದಿಂದ ರೋಗಿಗಳಿಗೆ ಔಷಧ ನೀಡುತ್ತಿದ್ದ ನಕಲಿ ವೈದ್ಯನ ಬಂಧನ.. ಇತಿಹಾಸ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ!