ದಾವಣಗೆರೆ: ಕರೆಂಟ್ ಬಿಲ್ ಕಟ್ಟಬೇಡಿ, ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿ, ಇಲ್ಲವಾದಲ್ಲಿ ನನಗೆ ಕರೆ ಮಾಡಿ. ನಾನು ಅಲ್ಲಿ ಹಾಜರಾಗುವೆ ಎಂದು ಸರ್ಕಾರದ ಭರವಸೆಗಳ ವಿರುದ್ದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಜನರಿಗೆ ತಿಳಿಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚಿಕ್ಕೇರಹಳ್ಳಿ ಹಾಗು ದೊಡ್ಡೇರಹಳ್ಳಿ ಗ್ರಾಮಗಳಿಗೆ ಭೇಟಿ ತಮ್ಮ ಕ್ಷೇತ್ರದ ಜನರಿಗೆ ಗ್ಯಾರಂಟಿಗಳ ಬಗ್ಗೆ ತಿಳಿಹೇಳಿ ಜಾರಿಯಾಗದೇ ಇದ್ದರೆ ಕರೆ ಮಾಡಿ ಎಂದರು.
ಇನ್ನು ಐದು ಗ್ಯಾರಂಟಿಗಳನ್ನು ಸರ್ಕಾರ ಬಂದ 24 ಗಂಟೆಯೊಳಗೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ಆದರೆ ಅದನ್ನೂ ಮಾಡಿಲ್ಲ. ಜನರಿಗೆ ಆಸೆ ಹುಟ್ಟಿಸಿ, ಸುಳ್ಳು ಭರವಸೆ ನೀಡಿದ್ದಾರೆ. ಈ ಗ್ಯಾರಂಟಿಗಳನ್ನು ಈಡೇರಿಸಲು ಸಾವಿರಾರು ಕೋಟಿ ಹಣ ಬೇಕಾಗುತ್ತದೆ. ಅವರು ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಗ್ಯಾರಂಟಿಗಳು ಜಾರಿಯಾಗದೇ ಇದ್ದರೆ ಪೊರಕೆ ಹೋರಾಟ: ರೇಣುಕಾಚಾರ್ಯ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳ ಮಾಜಿ ಶಾಸಕರಾಗಿದ್ದು, ಸರ್ಕಾರಗಳ ಭರವಸೆಗಳ ವಿರುದ್ದ ಜನರಲ್ಲಿ ಜನಾಂದೋಲನ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಕೆಲ ದಿನಗಳ ಗಡುವು ನೀಡಿದ ರೇಣುಕಾಚಾರ್ಯ ಇದೀಗ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸದೇ ಇದ್ದರೆ ಪೊರಕೆ ಚಳುವಳಿ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಗ್ಯಾರಂಟಿಗಳನ್ನು ಜಾರಿ ಮಾಡದೇ ಇದ್ದರೆ ಹೋರಾಟ ಮಾಡುವೆ. ಈ ಹೋರಾಟಕ್ಕೆ ನೀವೂ ಬನ್ನಿ ಎಂದು ಮಹಿಳೆಯರಿಗೆ ಮನವಿ ಮಾಡಿದರು. ಇನ್ನು ಒಂದು ವಾರ ಕಾದು ನೋಡೋಣ, ಒಂದು ವಾರ ಸಮಯಾವಕಾಶ ಕೊಡೋಣ. ಗ್ಯಾರಂಟಿಗಳನ್ನು ಜಾರಿ ಮಾಡದೇ ಇದ್ದರೆ ಈ ಚಳುವಳಿ ಮಾಡೋಣ. ಕರೆಂಟ್ ಬಿಲ್ ಕಟ್ಟಬೇಡಿ, ಸರ್ಕಾರ ಕಟ್ಟುತ್ತೆ ಎಂದು ಮನೆ ಮನೆಗೆ ತೆರಳಿ ಕರೆ ನೀಡಿದರು.
ರಾಜ್ಯ ಸರ್ಕಾರದ ತಪ್ಪು ನಿರ್ಧಾರದಿಂದ ಬಿಜೆಪಿಗೆ ದೊಡ್ಡ ಪೆಟ್ಟು: ಬಿಜೆಪಿ ಸೋಲಿನ ಕುರಿತು ಮೊನ್ನೆ ತಾನೇ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದರು. ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳು ಹಾಗೂ ಮೀಸಲಾತಿ ಗೊಂದಲದಿಂದ ಬಿಜೆಪಿಗೆ ದೊಡ್ಡಪೆಟ್ಟು ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಸೋಲೇ ಗೆಲುವಿನ ಮೆಟ್ಟಿಲು. ಕಾಂಗ್ರೆಸ್ ಹಸಿಸುಳ್ಳು ಹೇಳಿ, ಸುಳ್ಳು ಗ್ಯಾರೆಂಟಿ ಭರವಸೆಗಳನ್ನು ರಾಜ್ಯದ ಜನತೆಗೆ ಕೊಟ್ಟು ಅಧಿಕಾರಕ್ಕೆ ಬಂದಿದೆ.
ಕಾಂಗ್ರೆಸ್ನವರು ಯಾವ ರೀತಿ ಸರ್ಕಾರ ನಡೆಸುತ್ತಾರೆ ಎಂಬುದನ್ನು ಕಾದು ನೋಡೋಣ. ರಾಜ್ಯ ಸರ್ಕಾರದ ಕೆಲವೊಂದು ತಪ್ಪು ನಿರ್ಧಾರಗಳು ಹಾಗೂ ಮೀಸಲಾತಿ ವಿಚಾರದಲ್ಲಿ ಮಾಡಿಕೊಂಡ ಗೊಂದಲಗಳಿಂದ ಬಿಜೆಪಿಗೆ ಸೋಲಿನ ಅಘಾತವಾಗಿದೆ. ಉತ್ತಮ ಪ್ರಣಾಳಿಕೆ ನಮ್ಮಲ್ಲಿದ್ದರೂ ತಡವಾಗಿ ಬಿಡುಗಡೆ ಮಾಡಲಾಯಿತು. ಆದರೆ ಕಾಂಗ್ರೆಸ್ ನಾಯಕರು ಎರಡು ತಿಂಗಳು ಮುಂಚೆಯೇ ತಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಸುಳ್ಳು ಗ್ಯಾರಂಟಿ ಕಾರ್ಡ್ಗಳನ್ನು ನೀಡಿದರು. ಇದರಿಂದ ನಮಗೆ ಹಿನ್ನಡೆಯಾಯಿತು ಎಂದು ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಸಂಪುಟದ 16 ಸಚಿವರ ಮೇಲೆ ಕ್ರಿಮಿನಲ್ ಕೇಸ್: ಯಾರ ವಿರುದ್ಧ ಎಷ್ಟು?