ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ಮುಸ್ಲಿಂ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಈ ಸಲದ ಕಾಂಗ್ರೆಸ್ ಟಿಕೆಟ್ ಅನ್ನು ಶಾಮನೂರು ಬದಲಿಗೆ ಅಲ್ಪಸಂಖ್ಯಾತರಿಗೆ ಕೊಡಬೇಕೆಂಬ ಕೂಗು ಕೇಳಿ ಬಂದಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ. ಕ್ಷೇತ್ರದಲ್ಲಿರುವ 83 ಸಾವಿರ ಮುಸ್ಲಿಂ ಮತದಾರರೇ ನಿರ್ಣಾಯಕರು. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲೂ ಇಷ್ಟೊಂದು ಮುಸ್ಲಿಂ ಮತದಾರರಿಲ್ಲ. ಆದರೂ, ಈವರೆಗೆ ಕಾಂಗ್ರೆಸ್‌ನಿಂದ ಒಮ್ಮೆಯೂ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲವಂತೆ. ಪ್ರತಿ ಬಾರಿಯೂ ಇದು ತಮ್ಮ ಕೊನೆಯ ಚುನಾವಣೆ ಎಂಬುದಾಗಿ ಹೇಳಿಕೊಂಡೇ ಬಂದಿರುವ ಶಾಮನೂರು ಶಿವಶಂಕರಪ್ಪ, ಮುಂದಿನ ಬಾರಿ ಮುಸ್ಲಿಮರಿಗೆ ಟಿಕೆಟ್ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತ ಮೆಹೆಬೂಬ್ ಅಸಮಾಧಾನ ವ್ಯಕ್ತಪಡಿಸಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಮೆಹೆಬೂಬ್, "ಈ ಬಾರಿ ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕಾಗಿದೆ. ಟಿಕೆಟ್ ನೀಡುವಂತೆ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಸಿದ್ದರಾಮಯ್ಯಗೆ ಮನವಿ ಮಾಡಿದ್ದೇವೆ, ನಮ್ಮ ನಾಯಕ ಸಾದಿಕ್ ಪೈಲ್ವಾನ್ ಅವರಿಗೆ ಟಿಕೆಟ್ ಕೊಡಬೇಕು. ಶಾಮನೂರಿಗೆ ಕೊಟ್ಟರೆ ಬೇರೆ ಪಕ್ಷದ ಅಭ್ಯರ್ಥಿಗಳು ಸೇರಿ, ಅವರನ್ನು ಸೋಲಿಸ್ತಾರೆಂದು ಹೇಳಿದ್ದಾರೆ. ಇಷ್ಟಾದರೂ ಶಾಮನೂರು ಅವರಿಗೆ ಟಿಕೆಟ್ ಕೊಟ್ಟರೆ ನಮ್ಮ ಸಮಾಜದ ಮುಖಂಡರು ಸೇರಿ ನಿರ್ಧಾರ ಮಾಡುತ್ತೇವೆ" ಎಂದರು.
ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ಸಾದಿಕ್ ಪೈಲ್ವಾನ್‌ಗೆ ಈ ಬಾರಿ ಟಿಕೆಟ್ ನೀಡಬೇಕಾಗಿದೆ ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೇರೆ ಪಕ್ಷಗಳ ಮುಸ್ಲಿಂ ಅಭ್ಯರ್ಥಿಗಳು ಈಗಾಗಲೇ ಸಮಾಜದ ಸಭೆಯಲ್ಲಿ ಭರವಸೆ ಕೊಟ್ಟಿದ್ದಾರಂತೆ. ಹೀಗಾಗಿ, ಈ ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ನಮ್ಮ ಮನವಿ ನಿರ್ಲಕ್ಷಿಸಿದರೆ ಸಮಾಜದ ಸಭೆ ಕರೆದು, ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ: ದಾವಣಗೆರೆ ಉತ್ತರ, ದಕ್ಷಿಣದಲ್ಲಿ ಅಪ್ಪ-ಮಗ ಕಣಕ್ಕಿಳಿಯುವುದು ನಿಶ್ಚಿತ!
ಬಳಿಕ ಮಾತನಾಡಿದ ಕೈ ಕಾರ್ಯಕರ್ತ ದಾದಾಪೀರ್, "ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ಬಿಟ್ಟು ಕೊಡಬೇಕೆಂದು ಮನವಿ ಮಾಡಿದ್ದೇವೆ. ಸಾದಿಕ್ ಪೈಲ್ವಾನ್ ಅವರಿಗೆ ಟಿಕೆಟ್ ನೀಡಿದ್ರೆ ಉತ್ತಮ. ಶಾಮನೂರು ಶಿವಶಂಕರಪ್ಪನವರು ಕಳೆದ ಬಾರಿ ಮುಂದಿನ ಸಲ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ರು. ಅದರಂತೆ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡ್ಬೇಕು, ಇಲ್ಲವಾದಲ್ಲಿ ಸಮಾಜದ ಮುಖಂಡರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆ" ಎಂದರು.