ದಾವಣಗೆರೆ: ಶಾಲಾ ಮಕ್ಕಳು ಎದುರು ರಾಜಕೀಯ ಭಾಷಣ ಮಾಡಿದ್ರು ಎಂಬ ಒಂದೇ ಕಾರಣಕ್ಕೆ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರನ್ನೂ ತರಾಟೆಗೆ ತೆಗೆದುಕೊಂಡಿರುವ ಜನರು ವೇದಿಕೆಯಿಂದ ಕೆಳಗಿಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚೀಲೂರ ಗ್ರಾಮದಲ್ಲಿ ನಡೆದಿದೆ. ಶಾಲೆಯ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿದ್ದಕ್ಕೆ ಶಾಸಕರನ್ನು ವೇದಿಕೆ ಎದುರಿಗಿದ್ದ ವ್ಯಕ್ತಿಯೊಬ್ಬ ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರಿಗೆ ಶಾಲಾ ಕಾರ್ಯಕ್ರಮ ವೇದಿಕೆ ಮೇಲೆ ಇದ್ದ ವೇಳೆ ವ್ಯಕ್ತಿಯೊಬ್ಬ ರಾಜಕೀಯ ವಿಚಾರಗಳನ್ನು ಈ ವೇದಿಕೆ ಮೇಲೆ ಮಾತನಾಡ್ಬೇಡಿ. ಇದು ಶಾಲಾ ಮಕ್ಕಳ ಕಾರ್ಯಕ್ರಮ ಎಂದು ತಾಕೀತು ಮಾಡಿದ್ದಾನೆ. ಇದೇ ವೇಳೆ ಶಾಸಕ ರೇಣುಕಾಚಾರ್ಯರಿಗೆ ಬೊಟ್ಟು ತೋರಿಸಿ ಪುನರುಚ್ಚಿಸುತ್ತ ರಾಜಕೀಯ ಭಾಷಣ ಮಾತನಾಡಬೇಡಿ ಎಂದು ಅಂತ ಅವಾಜ್ ಹಾಕಿದ್ದಾನೆ.
ರಾಜಕೀಯ ಭಾಷಣಕ್ಕೆ ಜನಸಾಮಾನ್ಯರು ಗಲಾಟೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಚೀಲೂರ ಸರ್ಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮಕ್ಕಳಿಗೆ ಶಿಕ್ಷಣದ ವಿಚಾರವಾಗಿ ಮಾತನಾಡಬೇಕಿದ್ದ ವೇದಿಕೆಯಲ್ಲಿ ರಾಜಾರೋಷವಾಗಿ ರಾಜಕೀಯ ಭಾಷಣ ಮಾಡಿದ್ದರು. ಈ ವೇಳೆ ಇದು ಶಾಲಾ ಕಾರ್ಯಕ್ರಮವಿದ್ದು ಇಲ್ಲಿ ರಾಜಕೀಯ ಭಾಷಣ ಮಾಡಬೇಡಿ ಅಂತ ಜನಸಾಮಾನ್ಯರು ಕೂಗಿ, ಗಲಾಟೆ ಮಾಡಿದ್ದರು.
ಶಾಂತನಗೌಡ ವಿರುದ್ಧ ವಾಗ್ದಾಳಿ:ಅ ಕಾರ್ಯಕ್ರಮದಲ್ಲಿ ತಡವಾಗಿ ಭಾಗಿಯಾಗಿದ್ದ ಶಾಸಕ ರೇಣುಕಾಚಾರ್ಯ ಶಾಲೆಯ ವೇದಿಕೆ ಮೇಲೆ ಹೊನ್ನಾಳಿಯ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿ ಮಾತಿನಲ್ಲೂ ಅವರ ವಿರುದ್ದವಾಗಿ ಟೀಕೆ ಮಾಡುತ್ತಿದ್ದರು. ಈ ವೇಳೆ, ಶಾಲಾ ಮಕ್ಕಳು ಎದುರು ರಾಜಕೀಯ ಭಾಷಣ ಬೇಡ ಅಂತ, ಗ್ರಾಮದ ಕೆಲ ಜನರೂ ಶಾಸಕರನ್ನು ತರಾಟೆಗೆ ತೆಗೆದುಕೊಂಡು ತಬ್ಬಿಬ್ಬುಗೊಳಿಸಿದರು. ತಕ್ಷಣ ಭಾಷಣ ನಿಲ್ಲಿಸಿ ಎಂದು ಕೂಗಾಡಿದ ಚೀಲೂರು ಗ್ರಾಮಸ್ಥರು, ಶಾಸಕರನ್ನೂ ಕೆಳಗಿಳಿಸಿದ ಘಟನೆಯೂ ಕೂಡ ಜರುಗಿದೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.
ಶಾಸಕರು ಏನು ಅಂತಾರೆ...:ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಂಪಿ ರೇಣುಕಾಚಾರ್ಯ, ಅ ಕಾರ್ಯಕ್ರಮದಲ್ಲಿ ಯಾರೋ ಒಬ್ಬರು ಇಬ್ಬರು ಈ ರೀತಿ ಮಾಡಿದ್ದಾರೆ ಎನ್ನುವುದನ್ನೂ ನನ್ನ ರಾಜಕೀಯ ವೈರಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ವೈರಿಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದನ್ನೂ ಮಾಡುತ್ತಾರೆ. ಇಂಥ ಘಟನೆಗಳಿಗೆ ನಾನು ಕಿವಿಕೊಡುವನಂತಲ್ಲ. ಈ ಕಾರ್ಯಕ್ರಮದಲ್ಲಿ ಮಾಜಿ ಕೈ ಶಾಸಕ ಶಾಂತನಗೌಡ ಪುತ್ರ ಸುರೇಂದ್ರ ಗೌಡ ಹಾಜರಿದ್ದರು. ಅವರ ಪುತ್ರ ರಾಜಕೀಯ ಕಾರಣಕ್ಕೆ ನಮ್ಮ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಹೋಗಿದ್ದಾರೆ ಎಂದು ಮಾಜಿ ಶಾಸಕರ ವಿರುದ್ಧ ಆರೋಪಿಸಿದರು.
ಇದನ್ನೂಓದಿ:ನಿರ್ಮಾಣವಾದ ನಾಲ್ಕೇ ತಿಂಗಳಿಗೆ ₹ 3 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ಡಮಾರ್: ಜನರ ಆಕ್ರೋಶ