ರಾಣೆಬೆನ್ನೂರು: 29 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿರುವ ನಗರದ ಜನತೆಯ ಕನಸಿನ ಕೆರೆ ಎಂದು ಕರೆಸಿಕೊಳ್ಳುವ ದೊಡ್ಡಕೆರೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು 300 ಎಕರೆ ವಿಸ್ತೀರ್ಣ ಹೊಂದಿರುವ ದೊಡ್ಡಕೆರೆಯನ್ನು ಅಮೃತ ಯೋಜನೆಯಡಿ ಅಭಿವೃದ್ಧಿಗೊಳಿಸಲು ಅಂದಿನ ಶಾಸಕ ಆರ್.ಶಂಕರ್ ಚಾಲನೆ ನೀಡಿದ್ದರು. ಆದರೆ, ಕಾಮಗಾರಿ ಪ್ರಾರಂಭವಾಗಿ 2 ವರ್ಷಗಳು ಕಳೆದರೂ ಕೆಲಸ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಸದ್ಯ ಜಾಕವೆಲ್, ಪಂಪ್ಹೌಸ್, ಬಂಡ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಶೇ.50 ರಷ್ಟು ಬಾಕಿ ಇದೆ ಎನ್ನಲಾಗುತ್ತಿದೆ.
ಕೆರೆ ಉಸ್ತುವಾರಿ ಎಂಜಿನಿಯರ್ ಅವರನ್ನು ಸಂಪರ್ಕಿಸಿದಾಗ ಮಳೆ ನೀರು ಮತ್ತು ಕೊರೊನಾ ವೈರಸ್ ನೆಪ ಹೇಳುತ್ತಿದ್ದಾರೆ. ಅಲ್ಲದೇ ಸಂಪೂರ್ಣ ಕಾಮಗಾರಿಯನ್ನು ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಮುಗಿಸುವುದಾಗಿ ಭರವಸೆ ಕೂಡ ನೀಡಿದ್ದಾರೆ.
ಕಳಪೆ ಕಾಮಗಾರಿ ಆರೋಪ:
ರಾಣೆಬೆನ್ನೂರು ಜನತೆಗೆ ಅನುಕೂಲವಾಗಲೆಂದು ಅಮೃತ ಯೋಜನೆಯಡಿ 29 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಕೆರೆ ಸುತ್ತಲೂ ಕೇವಲ ಬಂಡ್, ಹೂಳು, ರಸ್ತೆ ಮಾಡಿದ್ದಾರೆ. ಕಾಮಗಾರಿಗೆ ತುಕ್ಕು ಹಿಡಿದ ಕಬ್ಬಿಣವನ್ನು ಬಳಸಲಾಗುತ್ತಿದೆ.
ಕೆರೆ ಮೇಲಿನ ರಸ್ತೆಗೆ ಗ್ರಾವೆಲ್ ಹಾಕಿಸುವ ಬದಲಾಗಿ ಕೆರೆಯ ಮಣ್ಣನ್ನು ತೆಗೆದು ಹಾಕಲಾಗುತ್ತದೆ. ಕಾಮಗಾರಿ ಹಗಲು ದಿನ ಮಾಡುವ ಬದಲಾಗಿ ರಾತ್ರಿ ಸಮಯದಲ್ಲಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ಸಿದ್ದಣ್ಣ ಚಿಕ್ಕಬಿದರಿ ಆರೋಪಿಸಿದರು.