ದಾವಣಗೆರೆ: ಲೋಕಸಭಾ ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಿರುಸಿನ ಪ್ರಚಾರಕ್ಕೆ ಇಳಿದಿವೆ. ಕಮಲ ಪಡೆಯಂತೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಜಿಲ್ಲೆಯ ಹೊನ್ನಾಳಿ ಪಟ್ಟಣಕ್ಕೆ ಕರೆಸಿ ಕಣ ರಂಗೇರುವಂತೆ ಮಾಡಿದೆ. ಆದರೆ ಕಾಂಗ್ರೆಸ್ ಪಾಳೆಯದಿಂದ ಯಾವ ನಾಯಕರು ಬರುತ್ತಾರೆ ಎಂಬುದು ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ.
ಇನ್ನು ಕಳೆದ ದಶಕದಿಂದೀಚೆಗೆ ಹೊನ್ನಾಳಿಯಲ್ಲಿ ರಾಷ್ಟ್ರದ ನಾಯಕರೊಬ್ಬರು ಬೃಹತ್ ರ್ಯಾಲಿ ನಡೆಸಿರುವುದು ಇದೇ ಮೊದಲು. ಬೆಂಗಳೂರು ಹೊರತುಪಡಿಸಿದರೆ ಲೋಕಸಭಾ ಚುನಾವಣೆಗೆ ದಾವಣಗೆರೆಯಿಂದಲೇ ಅಮಿತ್ ಶಾ ಪ್ರಚಾರ ಆರಂಭಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ತಾಲೂಕಿನ ಬಾತಿ ಗ್ರಾಮದಲ್ಲಿ ಅಮಿತ್ ಶಾ ಅಕ್ಕಿ ಮುಷ್ಠಿ ಕಾರ್ಯಕ್ರಮ ನಡೆಸಿದ್ದರು. ಆಗ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೂ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ದಾವಣಗೆರೆಯಿಂದಲೇ ಪ್ರಚಾರ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಖಡ್ಗ ನೀಡಿ, ಪೇಟ ತೊಡಿಸುವ ಮೂಲಕ ಜಿಲ್ಲೆಯ ಬಿಜೆಪಿ ನಾಯಕರು ಅಭಿನಂದಿಸಿದರು. ಮಾತ್ರವಲ್ಲ, ಸಾವಿರಾರು ಜನರು ಮೋದಿ ಮೋದಿ ಅಂತಾ ಘೋಷಣೆ ಹಾಕಿದಾಗ ಮೋದಿ ಒಡಿಶಾದಲ್ಲಿದ್ದಾರೆ. ಪ್ರಚಾರಕ್ಕೆ ನಾನು ಬಂದಿದ್ದೇನೆ. ಮೋದಿ ಬೆಂಬಲಿಸಿ. ಅಧಿಕಾರಕ್ಕೆ ಮತ್ತೊಮ್ಮೆ ಮೋದಿ ಬರುವಂತೆ ಮಾಡಿ ಎಂದು ಅಮಿತ್ ಶಾ ಮನವಿ ಮಾಡಿದರು.
ರಾಜ್ಯ ಸರ್ಕಾರ ಪತನ ಖಚಿತ : ರೇಣುಕಾಚಾರ್ಯ
ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್ - ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಪತನಗೊಳ್ಳುವುದು ಅಷ್ಟೇ ಸತ್ಯ. ಮೇ 23 ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದು ಮಧ್ಯರಾತ್ರಿಯೇ ಸರ್ಕಾರ ಪತನಗೊಳ್ಳುವುದು ನಿಶ್ಚಿತ. ಆ ನಂತರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅಮಿತ್ ಶಾ ಬರುವ ಮುನ್ನ ಮಾತನಾಡಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದರು.