ಹರಿಹರ : ಪಟ್ಟಣದ ಸೇವಾಸಿಂಧು ಕೇಂದ್ರದ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎಂ ಹೆಚ್ ಭೀಮಣ್ಣ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಮಾತನಾಡಿದ ಅವರು, ನಗರದ ಹಳೆ ಪಿ ಬಿ ರಸ್ತೆಯ ಗುರುಪಾದಪ್ಪರ ಕಟ್ಟಡದಲ್ಲಿ ನಡೆಯುತ್ತಿರುವ ಸೇವಾಸಿಂಧು ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರನ್ನು ಕಾರ್ಮಿಕರ ಇಲಾಖೆಯಲ್ಲಿ ನೋಂದಣಿ ಮಾಡಿಸಲು ಹೆಚ್ಚುವರಿ ಹಣ ಸಂಗ್ರಹಿಸುತ್ತಿದ್ದಾರೆಂದು ಕೆಲವರು ತಹಶೀಲ್ದಾರ್ಗೆ ದೂರು ನೀಡಿದ್ದಾರೆ. ಸರ್ಕಾರ ನಿಗದಿಪಡಿಸಿರುವಂತೆ ಒಬ್ಬರಿಂದ ಕೇವಲ 106 ರೂಪಾಯಿಗಳನ್ನು ಮಾತ್ರ ಅವರು ಸಂಗ್ರಹಿಸುತ್ತಿದ್ದಾರೆ. ನೋಂದಣಿ ಮಾಡಿಸಲು ಬರುವ ಕಾರ್ಮಿಕರಿಂದ ನಮ್ಮ ಸಂಘಟನೆಯ ನೋಂದಣಿ ಶುಲ್ಕವಾಗಿ ₹150 ಮತ್ತು ತಿಂಗಳಿಗೆ ₹20ನಂತೆ ಒಂದು ವರ್ಷ ಅವಧಿಯ 240 ರೂ.ಸಂಗ್ರಹಿಸಲಾಗುತ್ತಿದೆ.
ನಮ್ಮ ಸಂಘಕ್ಕೆ ಸಂಗ್ರಹಿಸುತ್ತಿರುವ ಹಣವನ್ನೂ ಸೇವಾಸಿಂಧು ಕೇಂದ್ರದವರೇ ಸಂಗ್ರಹಿಸುತ್ತಿದ್ದಾರೆಂದು ಸುಳ್ಳು ಆರೋಪ ಮಾಡಲಾಗಿದೆ. ಇದನ್ನು ಮಾಧ್ಯಮದ ಹೆಸರಿನಲ್ಲಿ ಒಂದು ಯುಟ್ಯೂಬ್ ಚಾನಲ್ ಪ್ರಸಾರ ಮಾಡುತ್ತಿದೆ. ಹೆದರಿಸಿ, ಬೆದರಿಸಿ ದುರ್ಲಾಭ ಪಡೆಯುವ ಉದ್ದೇಶದಿಂದ ಅಮಾಯಕರ ತೇಜೋವಧೆ ಮಾಡುವುದು ಸರಿಯಲ್ಲ. ಸುಳ್ಳು ಆರೋಪ ಮಾಡಿರುವವರು ಹಾಗೂ ಅದನ್ನು ಯೂಟ್ಯೂಬ್ನಲ್ಲಿ ಪ್ರಸಾರ ಮಾಡುತ್ತಿರುವವರ ವಿರುದ್ಧ ಶೀಘ್ರವೇ ಪೊಲೀಸರಿಗೆ ದೂರು ಸಲ್ಲಿಸಲಾಗುವುದು. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಸೇವಾಸಿಂಧು ಕೇಂದ್ರಗಳು ಮಾಡುತ್ತಿವೆ. ಇದರಿಂದ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ತಾಪತ್ರಯ ತಪ್ಪಿದೆ ಎಂದರು.
ಗೃಹಿಣಿ ನಾಜಿಮಾ ಬಾನು ಮಾತನಾಡಿ, ನನ್ನ ಪಾನ್ ಕಾರ್ಡ್, ಮಕ್ಕಳ ಆದಾಯ ಪ್ರಮಾಣ ಪತ್ರ, ಸ್ಕಾಲರ್‌ಶಿಪ್, ಆಧಾರ್ ಕಾರ್ಡ್ನಂತಹ ಸೌಲಭ್ಯಗಳನ್ನು ಈ ಸೇವಾಸಿಂಧು ಕೇಂದ್ರದ ಮೂಲಕವೇ ಪಡೆದುಕೊಂಡಿದ್ದೇನೆ. ನಿಸ್ವಾರ್ಥ ಸೇವೆ ಸಲ್ಲಿಸುವವರ ವಿರುದ್ಧ ಆರೋಪ ಮಾಡಿರುವುದು ಖಂಡಿಸುತ್ತೇನೆ. ಸುಳ್ಳು ಆರೋಪ ಮಾಡಿದವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಹೆಚ್ ಬಿ ಹನುಮಂತಪ್ಪ, ಹರಪನಹಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ್, ವಿದ್ಯಾನಗರ ಯುವಕ ಸಂಘದ ಶಂಕರ್ ಈ ಸಂದರ್ಭದಲ್ಲಿ ಇದ್ದರು.