ದಾವಣಗೆರೆ: ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದ ರೈತರಲ್ಲಿ ಆತಂಕ ಮನೆ ಮಾಡಿದೆ. ಇಲ್ಲಿನ ರೈತರಿಗೆ ಹೇಳದೇ-ಕೇಳದೆ ಜಮೀನಿನಲ್ಲಿ ಏನೂ ಕೂಡ ಬೆಳೆಯದಂತೆ ಭೂಸ್ವಾಧೀನಾಧಿಕಾರಿಗಳ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಈ ನೋಟಿಸ್ನಿಂದ ಇಡೀ ಗ್ರಾಮದ ರೈತರ ನಿದ್ದೆಗೆಡೆಸುವಂತೆ ಮಾಡಿದೆ.
ಮೆಳ್ಳೆಕಟ್ಟೆ ಗ್ರಾಮದ ಸುತ್ತಮುತ್ತ ಇರುವ 1,150 ಎಕರೆ ಕೃಷಿ ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಸಿದ್ಧತೆ ನಡೆಲಾಗಿದೆ. ಹೀಗಾಗಿ ಜಮೀನು ಬಿಟ್ಟುಕೊಡುವಂತೆ ನೂರಾರು ರೈತರಿಗೆ ನೋಟಿಸ್ ನೀಡಲಾಗಿದೆ. ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಿಂದ ರೈತರ ಪ್ರತಿಯೊಂದು ಮನೆಗೂ ನೋಟೀಸ್ ರವಾನಿಸಲಾಗಿದೆ.
ಅಲ್ಲದೇ, ಕೈಗಾರಿಕಾ ಕಾರಿಡಾರ್ ನಿರ್ಮಾಣ ಯೋಜನೆಗೆ ನಿಮ್ಮ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು, ಏನಾದರೂ ಆಕ್ಷೇಪಣೆಗಳು ಇದ್ದರೆ ತಿಳಿಸಬಹುದು ಎಂದು ಒಂದೇ ದಿನ ನೂರಾರು ರೈತರಿಗೆ ಈ ರೀತಿಯ ನೋಟಿಸ್ ಕಳಿಸಲಾಗಿದೆ. ಇದರಿಂದ ಆಕ್ರೋಶ ಗೊಂಡ ರೈತರು ಸರ್ಕಾರದ ವಿರುದ್ದ ಹಾಗೂ ಶಾಸಕರು, ಸಂಸದರು ವಿರುದ್ದ ಧಿಕ್ಕಾರ ಕೂಗಿ, ಜಮೀನಿಗಳಲ್ಲಿ ಮಲಗಿ ಪ್ರಾಣ ಹೋದರೂ ನಾವು ಜಮೀನುಗಳನ್ನು ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ.
ಇದು ಫಲವತ್ತಾದ ಕಪ್ಪು ಮಣ್ಣು, ಇದು ಕೃಷಿಗೆ ಮಾತ್ರ ಯೋಗ್ಯವಾದ ಭೂಮಿಯಾಗಿದೆ. ಇಂತಹ ಭೂಮಿಯಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ನಿರ್ಮಾಣ ಮಾಡಲು ಬರುವುದಿಲ್ಲ. ಈ ಜಮೀನಿನಲ್ಲಿ ಹತ್ತಾರು ಅಡಿಗಳಷ್ಟು ಗುಂಡಿ ತೆಗೆದರೂ ಫಲವತ್ತಾದ ಮಣ್ಣು ಸಿಗುತ್ತದೆ ಎಂದು ರೈತರು ಹೇಳುತ್ತಾರೆ.
ಫಲವತ್ತಾದ ಜಮೀನಿನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಮಾಡಲು ಬರುವುದಿಲ್ಲ. ಅಲ್ಲದೇ, 57 ಕೆರೆ ನೀರಾವರಿ ಯೋಜನೆ, ಭದ್ರ ಮೇಲ್ದಂಡೆ ಯೋಜನೆಗಳು ಬರುತ್ತಿದ್ದು, ಸರ್ಕಾರ ರೈತರ ಭೂಮಿಗಳನ್ನು ಸ್ವಾಧೀನ ಪಡೆಸಿಕೊಂಡರೆ ಕಾರ್ಖಾನೆಗಳಿಗೆ ರೈತರು ವಾಚ್ ಮ್ಯಾನ್ಗಳಾಗಬೇಕಾದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ನಮ್ಮ ಭೂಮಿಗಾಗಿ ನಾವು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ಫಲವತ್ತಾದ ಭೂಮಿಯನ್ನು ಕೊಡುವುದಿಲ್ಲ ಎಂದು ರೈತ ವೀರಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅರಣ್ಯ ಕೃಷಿ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಾದರಿ ರೈತನ ಯಶೋಗಾಥೆ