ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಹಾಡಹಗಲೇ ನಡೆದ ಬರ್ಬರ ಕೊಲೆ ಪ್ರಕರಣದಿಂದ ಜನ ಬೆಚ್ಚಿಬಿದ್ದಿದ್ದಾರೆ. ತನ್ನ ಎರಡನೆ ಹೆಂಡತಿಗೆ ತನ್ನಿಂದ ವಿಚ್ಛೇದನ ಕೊಡ್ಸಿ ಬೇರೆಯವರೊಂದಿಗೆ ಮದುವೆ ಮಾಡಿಸಿದ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಜಾಕೀರ್ (50) ಎಂಬಾತ ಹತ್ಯೆಯಾಗಿದ್ದು, ಸಲೀಂ (45) ಕೊಲೆ ಮಾಡಿದ ಆರೋಪಿ.
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಮೃತ ಜಾಕೀರ್ ವೃತ್ತಿಯಲ್ಲಿ ಬಸ್ ಏಜೆಂಟ್ ಆಗಿ ಜೀವನ ಸಾಗಿಸುತ್ತಿದ್ದ. ಅದರ ಜೊತೆಗೆ ನಲ್ಲೂರು ಗ್ರಾಮದ ಮಸೀದಿಯ ಕಾರ್ಯದರ್ಶಿಯಾಗಿ ಸಮಾಜದ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದ. ಅದೇ ಆತನಿಗೆ ಕಂಟಕವಾಗಿದೆ.
ಅದೇ ಗ್ರಾಮದ ಆರೋಪಿ ಸಲೀಂ ಎಂಬಾತ ಎರಡು ಮದುವೆಯಾಗಿದ್ದರು. ಮೊದಲ ಹೆಂಡತಿ ಕಾರಣಾಂತರಗಳಿಂದ ಬಿಟ್ಟು ಹೋಗಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಸಲೀಂ ಎರಡನೇ ಮದುವೆಯಾಗಿ ಪತ್ನಿಯ ಜೊತೆ ಜಗಳವಾಡಿ ಬೇರೆಯಾಗಿದ್ದರು. ಬಳಿಕ ಎರಡನೇ ಹೆಂಡತಿ ಬೇರೆಯವರೊಂದಿಗೆ ಮದುವೆಯಾಗಿದ್ದರಿಂದ ಮಸೀದಿಯ ಕಮಿಟಿ ಹಾಗೂ ಕಾರ್ಯದರ್ಶಿ ಜಾಕೀರ್ ಸಮ್ಮುಖದಲ್ಲಿ ಇಬ್ಬರಿಗೆ ವಿಚ್ಛೇದನ ಕೊಡಿಸಲಾಗಿತ್ತು.
ಮನಸೋಇಚ್ಛೆ ಚುಚ್ಚಿ ಕೊಲೆ: ಸಲೀಂ ಮೂರನೇ ಮದುವೆಯಾದ ಬಳಿಕ ಇದಕ್ಕೆ ಜಾಕೀರ್ ಕಾರಣವೆಂದು ಆರೋಪಿ ಸಲೀಂ ಶಂಕಿಸಿ ಜಾಕೀರ್ ಅವರನ್ನು ಚನ್ನಗಿರಿಗೆ ಕರೆದುಕೊಂಡು ಬಂದು ಜಗಳ ಮಾಡಿ ತರಳುಬಾಳು ಸರ್ಕಲ್‌ನಲ್ಲಿ ನೂರಾರು ಜನರ ಮುಂದೆಯೇ ಚಾಕುವಿನಿಂದ ಮನಸೋಇಚ್ಛೆ ಚುಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಸಲೀಂ ಚಾಕು ಜೊತೆ ಸೀದಾ ಚನ್ನಗಿರಿ ಠಾಣೆಗೆ ಹೋಗಿ ಶರಣಾಗಿದ್ದಾನೆ. ಗಂಡ-ಹೆಂಡತಿಯ ಜಗಳವನ್ನು ಸರಿ ಮಾಡಲು ಹೋಗಿ ಸರಿಯಾಗದ ಹಿನ್ನೆಲೆಯಲ್ಲಿ ವಿಚ್ಛೇದನ ಕೊಡಿಸಿದ್ದಕ್ಕೆ ಈತನೇ ಕಾರಣ ಎಂದು ಕೋಪಗೊಂಡ ಸಲೀಂ ಈ ರೀತಿ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ.
ಅಲ್ಲದೆ, ಜಾಕೀರ್ ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ಕುಟುಂಬದ ನಿರ್ವಹಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದರ ಜೊತೆಗೆ ತನ್ನ ಸಮುದಾಯದ ರಾಜೀ ಪಂಚಾಯಿತಿಗಳಿಗೆ ಹೋಗಿ ಎಲ್ಲರಿಗೂ ಒಳಿತು ಮಾಡುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಜಾಕೀರ್ ಮೂರು ಜನ ಹೆಣ್ಣು ಮಕ್ಕಳು, ಒಂದು ಗಂಡು ಮಗನನ್ನು ಹೊಂದಿದ್ದಾರೆ. ಇಡೀ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಗೆ ಪ್ರಮುಖ ಕಾರಣ ಏನು? ಎಂಬುದಕ್ಕೆ ಸತ್ಯಾಸತ್ಯತೆಗಳು ಪೊಲೀಸರ ತನಿಖೆ ನಂತರ ತಿಳಿದುಬರಬೇಕಿದೆ.