ದಾವಣಗೆರೆ: ಜಿಲ್ಲೆಯಲ್ಲಿ ಬಾಲಕನ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಸಂಚಲನ ಮೂಡಿಸುತ್ತಿದೆ. ಚನ್ನಗಿರಿಯಲ್ಲಿ ಇಬ್ಬರು ಬಾಲಕರಿಂದ ಓರ್ವ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದೆ. ಈ ಘಟನೆ ತಾಲೂಕಿನ ಪ್ರೌಢಶಾಲೆಯೊಂದರಲ್ಲಿ ಜುಲೈ 13 ರಂದು ನಡೆದಿದ್ದು, ಜೈಲೈ 14 ರಂದು ಬಾಲಕನ ಪೋಷಕರು ಪೊಲೀಸ್ ಠಾಣೆಯಲ್ಲಿ ದಾವೆ ಹೂಡಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆ ಎದುರು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಧರಣಿ ನಡೆಸಿದ್ದ ಸಂಬಂಧ ಪ್ರತಿಕ್ರಿಯಿಸಿದ ಎಸ್ಪಿ ಡಾ ಕೆ ಅರುಣ್, ತಾಲೂಕಿನ ಶಾಲೆಯೊಂದರಲ್ಲಿ ಬಾಲಕರಿಬ್ಬರಿಂದ ಬಾಲಕನಿಗೆ ಲೈಂಗಿಕ ಕಿರುಕುಳವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಮೂವರು ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಾಲಕನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಶಾಸಕರು ಈ ಘಟನೆ ಸುಳ್ಳು ಎಂದು ಹೇಳುತ್ತಿದ್ದಾರೆ. ಈಗಾಗಲೇ ಪ್ರಕರಣ ದಾಖಲಾಗಿದೆ. ಘಟನೆ ನಿಜವಿರಲಿ ಅಥವಾ ಸುಳ್ಳು ಇರಲಿ ತನಿಖೆ ನಡೆಸಿದ ನಂತರವೇ ಸತ್ಯಾಂಶ ಹೊರಬರಲಿದೆ ಎಂದರು.
ಈ ಪ್ರಕರಣ ಸಂಬಂಧ ಎಎಸ್ಪಿ ಬಸರಗಿ ನೇತ್ವತ್ವದಲ್ಲಿ ತಂಡ ರಚಿಸಲಾಗಿದೆ. ಸಿಸಿಟಿವಿ ಚೆಕ್ ಮಾಡಲು ಸೂಚಿಸಲಾಗಿದೆ. ತನಿಖೆಯಿಂದ ಸತ್ಯಾಂಶ ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಎಫ್ಐಆರ್ ಸಹ ದಾಖಲು ಮಾಡಿ ಮೂರು ಅಪ್ರಾಪ್ತ ಬಾಲಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಮೇಲೆ ನಿಜ ಹೊರಬಿಳಲಿದೆ. ಈ ವಿಚಾರವನ್ನು ಶಾಸಕರಿಗೆ ತಿಳಿಸಿದರೂ ಧರಣಿ ಮಾಡಿದ್ದಾರೆ ಎಂದು ಎಸ್ಪಿ ಹೇಳಿದರು.
ಕಡ್ಡಾಯ ರಜೆ ನೀಡಿದ ಎಸ್ಪಿ: ಪಿಎಸ್ಐ ಮತ್ತು ಸಿಪಿಐ ವಿರುದ್ಧ ಆರೋಪವಿರುವ ಕಾರಣ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಬೇಕಂತಲೇ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್ ಹಾಕಲಾಗ್ತಿದೆ ಎಂಬ ಆರೋಪವನ್ನು ಶಾಸಕರು ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತೇವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಎಸ್ಪಿ ರಾಮಗೊಂಡ ಬಸರಗಿ ತನಿಖೆ ಮಾಡಿ ವರದಿ ಕೊಡಲಿದ್ದಾರೆ. ತನಿಖೆ ಆಗಿ ವರದಿ ಕೊಡುವವರೆಗೂ ಅವರಿಬ್ಬರು ಕಡ್ಡಾಯ ರಜೆಯಲ್ಲಿರುವವರು ಎಂದು ಎಸ್ಪಿ ತಿಳಿಸಿದರು.
ಶಾಸಕರ ಆರೋಪವೇನು?: ಪ್ರತಿಭಟನೆ ವೇಳೆ ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ್ ವಿ ಶಿವಗಂಗಾರವರು, ಈ ಪ್ರಕರಣ ಸಂಬಂಧ ವಿಚಾರಿಸಲು ಪೋಲಿಸ್ ಠಾಣೆಗೆ ಆಗಮಿಸಿದ್ದೆ. ಇದೀಗ ಕಡ್ಡಾಯ ರಜೆ ಮೇಲೆ ತೆರಳಿರುವ ಚನ್ನಗಿರಿ ಪೋಲಿಸ್ ಠಾಣೆಯ ಪಿಎಸ್ಐ ಚಂದ್ರಶೇಖರ್ ಹಾಗೂ ಸಿಪಿಐ ಮಧು ಇವರಿಬ್ಬರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ಅವರು ದಾಖಲು ಮಾಡಿರುವ ಪ್ರಕರಣದಲ್ಲೂ ಸತ್ಯಾಂಶವಿಲ್ಲ. ಸುಮಾರು ಒಂದು ತಿಂಗಳಿನಿಂದ ಬೇಕಂತಲೇ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್ ಹಾಕಲಾಗುತ್ತಿದೆ. ಅವರ ದೌರ್ಜನ್ಯ ವಿರುದ್ಧ ನಮ್ಮ ಹೋರಾಟ. ಸಂಬಂಧಪಟ್ಟ ಅಧಿಕಾರಿಗಳು ಅಧಿಕಾರಿಬ್ಬರನ್ನು ಅಮಾನತು ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಶಾಸಕರು ಹೇಳಿದ್ದಾರೆ.
ಓದಿ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚನ್ನಗಿರಿ ಠಾಣೆ ಶಾಸಕರಿಂದ ಪ್ರತಿಭಟನೆ