ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿ ಬಳಿ ತುಂಗಭದ್ರಾ ನದಿಯ ಮಧ್ಯಭಾಗದಲ್ಲಿ ಸಿಲುಕಿದ್ದ 55 ಮಂಗಗಳನ್ನು ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗಿತ್ತಿದ್ದು, ತುಂಗಾ ಡ್ಯಾಂನಿಂದ ಭಾರೀ ನೀರು ಹೊರಬಿಡಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿ ಉಕ್ಕಿ ಹರಿಯಲಾರಂಭಿಸಿದೆ. ರಾಜನಹಳ್ಳಿಯಲ್ಲಿ ನೀರು ಹೆಚ್ಚಾಗಿ ಬಂದಿದೆ. ಆಹಾರ ಅರಸಿ ಬಂದಿದ್ದ ಮಂಗಗಳು ಗಿಡಗಳ ಮೇಲೆ ಸಿಲುಕಿ ಹಾಕಿಕೊಂಡಿದ್ದವು. ಕಳೆದ ಮೂರು ದಿನಗಳಿಂದ ಸತತ ಕಾರ್ಯಾಚರಣೆ ನಡೆಸಿ ಈವರೆಗೆ ಒಟ್ಟು 55 ಮಂಗಗಳನ್ನು ರಕ್ಷಣೆ ಮಾಡಲಾಗಿದೆ.
ಹೇಗಿತ್ತು ಕಾರ್ಯಾಚರಣೆ...?
ಪೊಲೀಸರು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೊದಲು ಬೋಟ್ಗಳ ಮೂಲಕ ಕೋತಿಗಳನ್ನು ಮರಗಳಿಂದ ಕೆಳಗಿಳಿಸಲು ಮೂರು ದಿನಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ್ದರು. ಬಳಿಕ ಬಲೆ ಹಾಕಿ ಹಿಡಿಯುವ ಪ್ರಯತ್ನ ಮಾಡಿದರು. ಆದರೂ ಕಾರ್ಯಾಚರಣೆ ಫಲ ನೀಡಲಿಲ್ಲ. ಅಲ್ಲದೇ, ಕ್ಷಣಕ್ಷಣಕ್ಕೂ ನೀರು ಹೆಚ್ಚಾಗುತ್ತಿತ್ತು.
ಒಂದು ಮರದಿಂದ ಮತ್ತೊಂದು ಮರಕ್ಕೆ ಕೋತಿಗಳು ಹಾರುತ್ತಿದ್ದವು. ಈ ಕಾರಣದಿಂದ ಈ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಎಲ್ಲಾ ಕೋತಿಗಳು ಒಂದೇ ಮರಕ್ಕೆ ಬರುವಂತೆ ಮಾಡಲಾಯಿತು. ಬಳಿಕ ನದಿಯ ದಡದಿಂದ ಕೋತಿಗಳು ಇದ್ದ ಮರಕ್ಕೆ ರೋಪ್ ವೇ ಮಾಡಿ ಸಣ್ಣದೊಂದು ಬ್ರಿಡ್ಜ್ ಸಿದ್ಧಪಡಿಸಲಾಯಿತು. ಅವುಗಳು ಒಂದೊಂದಾಗಿಯೇ ನಡೆದುಕೊಂಡು ಬಂದವು. ಇಂದು ಒಂದೇ ದಿನ 50 ಕೋತಿಗಳನ್ನು ರಕ್ಷಿಸಲಾಯಿತು.
ಒಟ್ಟು ಮೂರು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಎಲ್ಲಾ ಮಂಗಗಳನ್ನು ರಕ್ಷಣೆ ಮಾಡಲಾಗಿದೆ. ಈ ರಕ್ಷಣಾ ಕಾರ್ಯ ಕಠಿಣವಾಗಿತ್ತು. ಕಾರ್ಯಾಚರಣೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ಅಗ್ನಿಶಾಮಕ ದಳದ ಸತತ ಪರಿಶ್ರಮದಿಂದ ರಕ್ಷಣೆ ಮಾಡಲಾಯಿತು ಎಂದು ಅಗ್ನಿಶಾಮಕ ದಳದ ಜಿಲ್ಲಾಧಿಕಾರಿ ಬಸವಪ್ರಭು "ಈಟಿವಿ ಭಾರತ" ಕ್ಕೆ ತಿಳಿಸಿದ್ದಾರೆ.