ದಾವಣಗೆರೆ : ವಿಷಕಾರಿ ಹುಲ್ಲು ಸೇವಿಸಿ 34 ಕುರಿಗಳು ಮೃತಪಟ್ಟಿರುವ ಧಾರುಣ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ ಕುರಿಗಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುರಿದಾಸರಹಳ್ಳಿ ನಿವಾಸಿ ಡಿ. ಮಂಜಪ್ಪ ಎಂಬುವರಿಗೆ ಸೇರಿವೆ ಎಂದು ತಿಳಿದು ಬಂದಿದೆ. ಶನಿವಾರದ ದಿನದಂದು ಅಡಿಕೆ ತೋಟದಲ್ಲಿ ಹುಲ್ಲು ಮೇಯುವ ವೇಳೆ ವಿಚಿತ್ರ ಹುಲ್ಲು ತಿಂದು ಇದ್ದಕ್ಕಿದ್ದಂತೆ ಕುರಿಗಳು ಸಾವನ್ನಪ್ಪಿವೆ.
ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ ಸಾವನ್ನಪ್ಪಿದ ಕುರಿಗಳನ್ನು ಮಂಜಪ್ಪ ಉಳಿಸಿಕೊಳ್ಳಲು ಹರಸಾಹಸ ಪಟ್ರು ಕೂಡ ಕುರಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಇನ್ನೂ 50ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥವಾಗಿದ್ದು, ಸಕಾಲಕ್ಕೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರಿಂದ ಅವು ಪ್ರಾಣಾಪಾಯದಿಂದ ಪಾರಾಗಿವೆ.
34 ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಮಂಜಪ್ಪ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಸ್ವಸ್ಥತೆಯಿಂದ ಕೂಡಿದ ಕುರಿಗಳಿಗೆ ಚಿಕಿತ್ಸೆ ಮುಂದುವರೆಸಬೇಕಾಗಿದೆ ಎಂದು ಪಶುವೈದ್ಯರು ಕುರಿಗಾಹಿ ಮಂಜಪ್ಪಗೆ ತಿಳಿಸಿದ್ದಾರೆ.
ಆಕಸ್ಮಿಕ ಬೆಂಕಿ ಅವಘಡಕ್ಕೆ 40 ಕುರಿಗಳು ಭಸ್ಮ, ರೈತ ಕಂಗಾಲು: ಇನ್ನೊಂದೆಡೆ ಆಕಸ್ಮಿಕವಾಗಿ ಬೆಂಕಿ ತಗುಲಿ 40 ಕ್ಕೂ ಹೆಚ್ಚು ಕುರಿಗಳು ಸುಟ್ಟು ಭಸ್ಮವಾಗಿರುವ ಘಟನೆ ಚಾಮರಾಜನಗರದ ಕೋಡಿಉಗನೆ ಗ್ರಾಮದಲ್ಲಿ (ಜುಲೈ 2 -2022) ರಂದು ನಡೆದಿತ್ತು. ಗ್ರಾಮದ ನಿವಾಸಿ ಮಹಾದೇವ ಎಂಬವರ ಕುರಿದೊಡ್ಡಿಗೆ ಆಕಸ್ಮಿಕ ಬೆಂಕಿ ತಗುಲಿ ಈ ಘಟನೆ ಸಂಭವಿಸಿತ್ತು. ಈ ಘಟನೆ ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಇದನ್ನೂ ಓದಿ : ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಿಂದ ಸುಲಿಗೆ; ಪುಲಿಕೇಶಿ ನಗರ ಠಾಣೆಯ ಮತ್ತಿಬ್ಬರು ಕಾನ್ಸ್ಟೇಬಲ್ಸ್ ಅಮಾನತು
ಇವರ ಕುರಿದೊಡ್ಡಿಯಲ್ಲಿ 40 ಕ್ಕೂ ಹೆಚ್ಚು ಕುರಿಗಳಿದ್ದವು. ಬೆಂಕಿ ಬಿದ್ದ ಕೂಡಲೇ ನೋಡನೋಡುತ್ತಿದ್ದಂತೆ ಎಲ್ಲ ಕುರಿಗಳು ಸುಟ್ಟು ಕರಕಲಾಗಿದ್ದವು. ಇನ್ನು ಬೆಂಕಿ ಅವಘಡ ಉಂಟಾಗುತ್ತಿದ್ದಂತೆ ಎಚ್ಚೆತ್ತ ಮಹಾದೇವ ಹಾಗೂ ನೆರೆಹೊರೆಯವರು ಅಗ್ನಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದರು.
ಇದನ್ನೂ ಓದಿ : ಚಾಮರಾಜನಗರ: ಆಕಸ್ಮಿಕ ಬೆಂಕಿ ಅವಘಡಕ್ಕೆ 40 ಕುರಿಗಳು ಭಸ್ಮ, ರೈತ ಕಂಗಾಲು!