ದಾವಣಗೆರೆ: ಬಸ್ ಚಕ್ರ ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ನಗರದ ಅರುಣ ಟಾಕೀಸ್ ಬಳಿ ನಡೆದಿದೆ.
ನಗರದ ಎಸ್ ಎಸ್ ಲೇಔಟ್ ನಿವಾಸಿ ಶಾಲಾ ಶಿಕ್ಷಕ ಬಸವರಾಜಪ್ಪ, ಅಪೂರ್ವ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೆ. ಎಂ. ಸ್ವಾಮಿ ಮೃತರು.
ಅರುಣಾ ಚಿತ್ರಮಂದಿರದಿಂದ ವಿನೋಬನಗರದ ಕಡೆಗೆ ಬಸವರಾಜಪ್ಪ ಹಾಗೂ ಸ್ವಾಮಿ ತಮ್ಮ ಬೈಕ್ಗಳಲ್ಲಿ ತೆರಳುತ್ತಿದ್ದರು. ಈ ವೇಳೆ ಆರಾಧ್ಯ ಸ್ಟೀಲ್ ಫ್ಯಾಕ್ಟರಿಗೆ ಸೇರಿದ ಬಸ್ ಅನ್ನು ಚಾಲಕ ಎಡಕ್ಕೆ ತೆಗೆದುಕೊಂಡಿದ್ದಾನೆ. ಆಗ ಬೈಕ್ಗಳಿಗೆ ಬಸ್ ತಾಗಿದ ಪರಿಣಾಮ ಬಸವರಾಜಪ್ಪ ಹಾಗೂ ಸ್ವಾಮಿ ಕೆಳಗೆ ಬಿದ್ದಿದ್ದಾರೆ. ಬಸ್ ನ ಚಕ್ರ ಇಬ್ಬರ ಮೇಲೆ ಹರಿದ ಪರಿಣಾಮ ಬಸವರಾಜಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಸ್ವಾಮಿ ಚಿಕಿತ್ಸೆ ಫಲಿಸದೇ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹರಪನಹಳ್ಳಿ ತಾಲೂಕಿನ ಜಂಗಮ ತುಂಬೆಗೆರೆಯಲ್ಲಿ ಕೆಲಸ ಮುಗಿಸಿಕೊಂಡು ಬಸವರಾಜಪ್ಪ ಮನೆಗೆ ತೆರಳುತ್ತಿದ್ದ. ಈ ವೇಳೆ ದುರ್ಘಟನೆ ನಡೆದಿದೆ. ಅಪಘಾತದ ಬಳಿಕ ಬಸ್ನ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಟ್ರಾಫಿಕ್ ಪೊಲೀಸರು ಬಸ್ನ್ನು ವಶಪಡಿಸಿಕೊಂಡಿದ್ದಾರೆ.