ದಾವಣಗೆರೆ : ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಬೆನ್ನಲ್ಲೇ ಗಲಾಟೆಗಳಿಂದ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿತ್ತು. ಆದರೆ, ಇದೀಗ ಪರಿಸ್ಥಿತಿ ತಿಳಿಯಾದ ಬೆನ್ನಲ್ಲೇ ಹೈಕೋರ್ಟ್ ಮಧ್ಯಂತರ ಆದೇಶ ಇರುವುದರಿಂದ ಸರ್ಕಾರ ನಾಳೆಯಿಂದ ಕಾಲೇಜ್ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ದಾವಣಗೆರೆ ಜಿಲ್ಲೆಯಲ್ಲಿ ಶನಿವಾರದವರೆಗೂ ಜಿಲ್ಲಾಧಿಕಾರಿ 144 ನಿಷೇಧಾಜ್ಞೆಯನ್ನು ಮುಂದುವರೆಸಿದ್ದಾರೆ. ಎಲ್ಲಾ ಪದವಿ ಕಾಲೇಜ್, ಡಿಪ್ಲೊಮಾ, ಪಿಯುಸಿ ತರಗತಿಗಳು ಆರಂಭವಾಗುತ್ತಿದ್ದು, ಸೂಕ್ಷ್ಮ ಪ್ರದೇಶದ ಕಾಲೇಜುಗಳಿಗೆ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ.
ನಾಳೆ ಬೆಳಗ್ಗೆ 6 ಗಂಟೆಯಿಂದ 19ನೇ ತಾರೀಖು ಸಂಜೆವರೆಗೂ 144 ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹೈಕೋರ್ಟ್ ಆದೇಶ ಅಕ್ಷರಶಃ ಪಾಲನೆ ಮಾಡಲು ಜಿಲ್ಲಾಡಳಿತ ಕಟಿಬದ್ಧವಾಗಿದೆ. ಇನ್ನು ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ ಮಾಡಲಾಗಿದೆ.
ವಿದ್ಯಾರ್ಥಿ, ಶಿಕ್ಷಕರು, ಶೈಕ್ಷಣಿಕ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೂ ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿದೆ. ನಗರದ ಕೇಂದ್ರ ಭಾಗ ತಾಲೂಕು ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳನ್ನು ಕೂಡ ನೇಮಕ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆಯಂತೆ.