ಮಂಗಳೂರು: ದಕ್ಷಿಣ ಕನ್ನಡದಲ್ಲಿ ತಾಪಮಾನ ದಿನೇ ದಿನೇ ಏರುತ್ತಿದ್ದು ವಿಪರೀತ ಸೆಕೆಯಿದೆ. ಹೀಗಾಗಿ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಸಾಕಷ್ಟು ಸಂಕಷ್ಟ ಅನುಭವಿಸುತ್ತಿವೆ. ಪ್ರಾಣಿಗಳಿಗೆ ಕೃತಕ ವ್ಯವಸ್ಥೆಯ ಮೂಲಕ ದೇಹ ತಂಪಾಗಿಸುವ ಪ್ರಯತ್ನವನ್ನು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ನಡೆಸಲಾಗುತ್ತಿದೆ.
ಮನುಷ್ಯ ವಿಪರೀತ ಸೆಕೆಯಿಂದ ಬಳಲುತ್ತಿದ್ದರೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಆದರೆ ಪ್ರಾಣಿಗಳಿಗೆ ಇದು ಅಸಾಧ್ಯ. ಹಾಗಾಗಿ ಸ್ಟ್ರಿಂಕ್ಲರ್ ಮೂಲಕ ನೀರು ಹಾಯಿಸುವ ಕೆಲಸ ಮಾಡಲಾಗುತ್ತಿದೆ.
ಪ್ರಾಣಿ ಪಕ್ಷಿಗಳಿರುವ ಪ್ರದೇಶದಲ್ಲಿ ಸ್ಪ್ರಿಂಕ್ಲರ್ಗಳನ್ನು ಅಳವಡಿಸಿ ಸುತ್ತಮುತ್ತ ವಾತಾವರಣವನ್ನು ತಂಪಾಗಿಸುವ ಪ್ರಯತ್ನ ಒಂದೆಡೆಯಾದರೆ, ಪೈಪ್ ಮೂಲಕ ಅವುಗಳಿಗೆ ನೀರು ಚಿಮುಕಿಸಲಾಗುತ್ತಿದೆ. ಇಲ್ಲಿರುವ ಹುಲಿಗಳಿಗೆ ವಿಪರೀತ ಸೆಕೆ ತಡೆಯಲು ಅಸಾಧ್ಯವಾಗಿದ್ದು ಅದಕ್ಕಾಗಿ ಫ್ಯಾನ್ ವ್ಯವಸ್ಥೆ ಕೂಡ ಮಾಡಲಾಗಿದೆ. ಉದ್ಯಾನವನದಲ್ಲಿ ತಿರುಗುವ ಪ್ರಾಣಿಗಳು ಕೊಳ, ನೆರಳಿನ ಆಶ್ರಯ ಪಡೆಯುತ್ತಿದೆ.