ಬಂಟ್ವಾಳ: ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ ನೀರಿಗೆ ಯುವಕರು ಹಾರಿ ಅಪಾಯಕಾರಿ ದುಸ್ಸಾಹಸ ಪ್ರದರ್ಶಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಂಟ್ವಾಳದ ಪಾಣೆ ಮಂಗಳೂರು ಸೇತುವೆಯಿಂದ ಯುವಕರ ತಂಡ ನದಿಗೆ ಹಾರುತ್ತಿದ್ದ ದೃಶ್ಯಗಳು ಇವು.
ಪ್ರತಿ ವರ್ಷವೂ ಮಳೆಗಾಲದಲ್ಲಿ ನದಿಗೆ ಹಾರಿ ಇವರು ಸಾಹಸ ಪ್ರದರ್ಶನ ಮಾಡುತ್ತಿದ್ದಾರೆ. ನದಿಗೆ ಹಾರಿ ದುಸ್ಸಾಹಸ ತೋರುವ ಯುವಕರು, ಬಳಿಕ ಸುರಕ್ಷಿತವಾಗಿ ದಡಕ್ಕೆ ಮರಳುತ್ತಾರೆ. ಆದರೆ ಈ ಸಾಹಸವನ್ನು ಇತರರೇನಾದರೂ ಅನುಸರಿಸಿದರೆ ಅಪಾಯ ನಿಶ್ಚಿತ.
ಪಾಣೆಮಂಗಳೂರಿನ ಹಳೆ ಉಕ್ಕಿನ ಸೇತುವೆಯ ಮೇಲ್ಭಾಗದಿಂದ ನೇರವಾಗಿ ನೇತ್ರಾವತಿ ನದಿಗೆ ಹಾರುವುದನ್ನು ನೋಡಲು ಮತ್ತಷ್ಟು ಜನರು ಬರುತ್ತಿದ್ದಾರೆ. ಇವರಿಂದ ಪ್ರೇರಿತರಾಗಿ ಮತ್ತಷ್ಟು ಮಂದಿ ಈ ಅಪಾಯಕಾರಿ ಆಟದಲ್ಲಿ ತೊಡಗಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದವು. ನೇತ್ರಾವತಿ ನದಿಯ ಗೂಡಿನಬಳಿ ಸೇತುವೆ ಸಮೀಪ ಯಾರೇ ನದಿಗೆ ಹಾರಿದರೂ ಅವರನ್ನು ರಕ್ಷಿಸಲು ಜೀವರಕ್ಷಕರು ಇರುತ್ತಾರೆ. ಸ್ಥಳೀಯ ನುರಿತ ಈಜು ಪಟುಗಳು ಇತ್ತೀಚೆಗೆ ಯುವಕನೊಬ್ಬನನ್ನು ರಕ್ಷಿಸುತ್ತಿರುವ ದೃಶ್ಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಆದರೆ, ವಿನಾ ಕಾರಣ, ಸಾಹಸ ಪ್ರದರ್ಶನಕ್ಕೋಸ್ಕರ ನೀರಿಗೆ ಹಾರುವ ಅಪಾಯಕಾರಿ ಕೃತ್ಯಗಳು ಇತರರಿಗೆ ನಡುಕ ಹುಟ್ಟಿಸಿದರೆ, ಇದನ್ನು ಅನುಸರಿಸಿದರೆ ಪ್ರಾಣ ಕಳಕೊಳ್ಳುವ ಸಾಧ್ಯತೆಗಳೂ ಜಾಸ್ತಿ ಎನ್ನುತ್ತಾರೆ ನುರಿತ ಈಜುಗಾರರು.