ಸುಬ್ರಹ್ಮಣ್ಯ: ಪಂಚಮಿ ಮತ್ತು ಚಂಪಾ ಷಷ್ಠಿ ದಿನದಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬರುವ ಭಕ್ತರಿಗೆ ಅಚ್ಚುಕಟ್ಟಾಗಿ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಹಿಳಾ ಪೊಲೀಸ್ ಅಧಿಕಾರಿಯೋರ್ವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಒಂದು ಜಾತ್ರೆ ಅಥವಾ ಉತ್ಸವ ಸುಸೂತ್ರವಾಗಿ ನಡೆಯಬೇಕಾದರೆ ಅಲ್ಲಿ ಹಲವಾರು ವ್ಯವಸ್ಥೆ ಸರಿಯಾಗಿರಬೇಕು. ಅದರಲ್ಲೂ ಸಾವಿರಾರು ಜನರು ಸೇರುವ ವಿಶ್ವ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯದಂತಹ ಪುಣ್ಯತಾಣಗಳಲ್ಲಿ ವಾಹನ ದಟ್ಟಣೆ, ಟ್ರಾಫಿಕ್ ನಿಯಂತ್ರಣ ಒಂದು ದೊಡ್ಡ ಸವಾಲೇ ಆಗಿರುತ್ತದೆ. ಈ ವರ್ಷ ಕುಕ್ಕೆ ಸುಬ್ರಮಣ್ಯದಲ್ಲಿ ಪುರುಷ ಪೊಲೀಸ್ ಅಧಿಕಾರಿಗಳು ಹಾಗೂ ಮಹಿಳಾ ಸಿಬ್ಬಂದಿ ಜತೆಗೆ ಮಹಿಳಾ ಪ್ರೊಬೇಷನರಿ ಪಿಎಸ್ಐ ಒಬ್ಬರು ಅಚ್ಚುಕಟ್ಟಾಗಿ ಟ್ರಾಫಿಕ್ ನಿಯಂತ್ರಣ ಮಾಡಿ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾರೆ.
ಇವರ ಹೆಸರು ಭವಾನಿ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠಿ ಉತ್ಸವದ ನಿಮಿತ್ತ ಮೇಲಾಧಿಕಾರಿಗಳ ಆದೇಶದಂತೆ ಇವರು ಜಾತ್ರಾ ಕರ್ತವ್ಯಕ್ಕೆ ಬಂದಿದ್ದರು. ಪಂಚಮಿ ಮತ್ತು ಷಷ್ಠಿಯ ದಿನದಂದು ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರಾದ ಪ್ರವೇಶದ್ವಾರದ ಬಳಿ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಿಂದ ಬರುವ ಭಕ್ತರ ವಾಹನಗಳನ್ನು ಟ್ರಾಫಿಕ್ ಸಮಸ್ಯೆ ಆಗದಂತೆ ನಿಯಂತ್ರಣ ಮಾಡುವುದು ಇವರ ಕರ್ತವ್ಯವಾಗಿತ್ತು.
ಒಂದರ ನಂತರ ಇನ್ನೊಂದರಂತೆ ಸಾಲುಸಾಲಾಗಿ ಆಗಮಿಸುವ ವಾಹನಗಳ ನಡುವೆ ಸುಡುಬಿಸಿಲಿನಲ್ಲಿ ಒಂದೆರಡು ಪುರುಷ ಪೊಲೀಸ್ ಸಿಬ್ಬಂದಿ ಜತೆಯಲ್ಲಿ ನಿಂತು ವಾಹನಗಳ ದಟ್ಟಣೆ ನಿಯಂತ್ರಣ ಮಾಡಿದ್ದಾರೆ. ಅಲ್ಲದೇ ಸಂಚಾರಿ ನಿಯಮ ಪಾಲನೆ ಮಾಡದವರಿಗೆ ಎಚ್ಚರಿಕೆ ನೀಡಿದ್ದಾರೆ.
ಸಂಚಾರ ನಿಯಂತ್ರಣ ಮಾಡುವುದು, ವೃದ್ಧರನ್ನು, ಮಹಿಳೆಯರು, ಮಕ್ಕಳನ್ನು ಸುರಕ್ಷಿತವಾಗಿ ಮತ್ತು ಜಾಗೃತೆಯಿಂದ ರಸ್ತೆ ದಾಟಿಸಿ ಎರಡು ದಿನಗಳ ಕಾಲ ಈ ಮಹಿಳಾ ಪೊಲೀಸ್ ಅಧಿಕಾರಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರು.
ಎರಡು ದಿನಗಳಿಂದ ಅತ್ಯಧಿಕ ವಾಹನಗಳ ಓಡಾಟ ಇರುವ ಇಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದೀರಿ. ಅದರ ನಡುವೆ ಅತ್ಯಧಿಕ ಬಿಸಿಲು ಕೂಡಾ ಇದೆ. ತಮಗೆ ಬೇಸರ ಅನಿಸಲ್ವಾ? ಎಂಬ 'ಈಟಿವಿ ಭಾರತ' ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಿದ ಪಿಎಸ್ಐ ಭವಾನಿ ಅವರು, "ಸರ್ ಇದು ನನ್ನ ಪ್ರೊಬೇಷನರಿ ಅವಧಿ. ನಮ್ಮಂತಹ ಪೊಲೀಸ್ ಅಧಿಕಾರಿಗಳಿಗೆ ಇಂತಹ ವಿಚಾರಗಳ ಬಗ್ಗೆ ತರಬೇತಿ ಪಡೆಯಲು ತುಂಬಾ ಇದೆ. ಇಲ್ಲಿ ನನಗೆ ನನ್ನ ಮೇಲಾಧಿಕಾರಿಗಳು ಕರ್ತವ್ಯಕ್ಕೆ ನಿಯೋಜನೆ ಮಾಡಿದಾಗ ತುಂಬಾ ಸಂತೋಷದಿಂದ ಒಪ್ಪಿಕೊಂಡು ಕೆಲಸ ನಿರ್ವಹಿಸಿದ್ದೇನೆ. ಇದು ನನ್ನ ಕರ್ತವ್ಯ. ನನ್ನ ಕಲಿಕೆಗೆ ಮತ್ತು ತರಬೇತಿಗೆ ನನಗೆ ಈ ಬಿಸಿಲು ನನಗೆ ಅಡ್ಡಿಯಾಗಿಲ್ಲ" ಎಂದು ನಗುತ್ತಲೇ ಉತ್ತರಿಸಿದರು.
ಇದನ್ನೂ ಓದಿ: ಸಂಭ್ರಮದ ಜೊತೆ ದೈವಭಕ್ತಿಯಿಂದ ನೆರವೇರಿದ ಕುಕ್ಕೆ ಚಂಪಾಷಷ್ಠಿ ಉತ್ಸವ