ಬಂಟ್ವಾಳ (ದ.ಕ.): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಹಿಳೆಯೊಬ್ಬರು ಕೋವಿಡ್-19 ವೈರಸ್ಗೆ ಬಲಿಯಾದ ಹಿನ್ನೆಲೆಯಲ್ಲಿ ಇಡೀ ಬಂಟ್ವಾಳ ಪೇಟೆಯನ್ನು ಬಂದ್ ಮಾಡಲಾಗಿದೆ.
ಸೀಲ್ ಹಿನ್ನೆಲೆ ಯಾರೂ ಮನೆಯಿಂದ ಹೊರಬರುತ್ತಿಲ್ಲ. ಭಾನುವಾರ ರಾತ್ರಿ ಪೇಟೆಯ ಪ್ರಮುಖ ರಸ್ತೆಯನ್ನು ಬ್ಯಾರಿಕೇಡ್ ಮತ್ತು ತಾತ್ಕಾಲಿಕವಾಗಿ ಮಣ್ಣಿನ ಗೋಡೆ ಕಟ್ಟುವ ಮೂಲಕ ಬಂದ್ ಮಾಡಲಾಗಿದೆ. ಬಂಟ್ವಾಳ ತಾಲೂಕಾಡಳಿತವು ಜಿಲ್ಲಾಡಳಿತ ಸೂಚನೆಯಂತೆ ಪುರಸಭೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಹಿತ ನಾನಾ ಸರ್ಕಾರಿ ಇಲಾಖೆಯ ಅಧಿಕಾರಿ ಸಿಬ್ಬಂದಿ ನಿಗಾ ಇರಿಸಿದ್ದು, ಸಾರ್ವಜನಿಕರಿಗೆ ಅವಶ್ಯವಿರುವ ವಸ್ತುಗಳನ್ನು ಮನೆಮನೆಗೆ ಒದಗಿಸಲಿದ್ದಾರೆ.
ಈಗಾಗಲೇ ಮೃತ ಮಹಿಳೆಯ ಪತಿ, ಮಕ್ಕಳು, ಸುತ್ತಮುತ್ತಲಿನ ಮನೆಯವರು ಸೇರಿ 20ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿದ್ದು, ಆಕೆಗೆ ಚಿಕಿತ್ಸೆ ನಡೆಸಿದ ಬಂಟ್ವಾಳದ ವೈದ್ಯರನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಪ್ರತಿಯೊಂದು ಮನೆಗಳಿಗೂ ತೆರಳಿ ಹಲವರ ಗಂಟಲು ದ್ರವ ಪಡೆದು ತಪಾಸಣೆ ರವಾನಿಸಲಾಗುತ್ತಿದೆ.
ಇನ್ನು, 28 ದಿನಗಳ ಕಾಲ ಬಂಟ್ವಾಳ ಪೇಟೆಯಲ್ಲಿ ಈ ಪರಿಸ್ಥಿತಿ ಇದ್ದು, ಸುತ್ತಮುತ್ತಲಿನ ಪ್ರದೇಶಗಳಾದ ಬಿ.ಸಿ. ರೋಡ್ ನಲ್ಲೂ ಕಟ್ಟುನಿಟ್ಟಿನ ನಿರ್ಬಂಧ ಜಾರಿಯಲ್ಲಿರಲಿದೆ. ಹೆದ್ದಾರಿಯಲ್ಲಷ್ಟೇ ವಾಹನ ಸಂಚಾರಕ್ಕೆ ಅವಕಾಶ ಕೊಡಲಾಗುತ್ತದೆ ಎಂದು ಡಿವೈಎಸ್ಪಿ ವೆಲಂಟೈನ್ ಡಿಸೋಜ ತಿಳಿಸಿದ್ದಾರೆ.