ಮಂಗಳೂರು: ನಗರದ ಹ್ಯಾಟ್ ಹಿಲ್ ಬಳಿ ಮುಂಜಾನೆ ಕಾಡುಕೋಣ ಪ್ರತ್ಯಕ್ಷಗೊಂಡಿದ್ದುಜನರು ಬೆಚ್ಚಿಬಿದ್ದಿದ್ದಾರೆ.
ಇಂದು ಮುಂಜಾನೆ 6.30 ಸುಮಾರಿಗೆ ನಗರದ ಬಲ್ಲಾಳ್ ಬಾಗ್ ಸಮೀಪದ ವಿಶಾಲ್ ನರ್ಸಿಂಗ್ ಹೋಮ್ ಸಮೀಪದ ಗದ್ದೆಯಲ್ಲಿ ಈ ಕಾಡುಕೋಣ ಕಾಣಿಸಿಕೊಂಡಿದೆ. ನೋಡಿದವರು ತಕ್ಷಣ ಅದರ ವಿಡಿಯೋ, ಫೋಟೋ ಗಳನ್ನು ತೆಗೆದು ವೈರಲ್ ಮಾಡಿದ್ದಾರೆ.
ಏಕಾಏಕಿ ನಗರದೊಳಗೆ ಕಾಡುಕೋಣ ಕಾಣಿಸಿದರಿಂದ ಜನರು ಭಯಭೀತರಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಅಗಮಿಸಿದ ಅರಣ್ಯ ಇಲಾಖೆಯ ತಂಡ ಕಾಡುಕೋಣ ಹಿಡಿಯಲು ಕಾರ್ಯಾಚರಣೆ ಕೈಗೊಂಡಿದೆ.
ಈಗಾಗಲೇ ಕಾಡುಕೋಣವೂ ಭೀತಿಗೊಳಗಾಗಿದ್ದು, ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಸುಮಾರು 40 ದಿನಗಳಿಂದ ಲಾಕ್ ಡೌನ್ ಅಗಿರುವ ಕಾರಣ ಜನ, ಸಂಚಾರವಿಲ್ಲದೆ ಕಾಡುಕೋಣ ನಗರದೊಳಗೆ ಪ್ರವೇಶ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದ ಬಜ್ಪೆ, ಅದ್ಯಪಾಡಿ ಅರಣ್ಯ ಪ್ರದೇಶದ ಸುತ್ತಮುತ್ತಲೂ ಕಾಡುಕೋಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅಲ್ಲಿಂದ ಬಂದಿರುವ ಸಾಧ್ಯತೆ ಇರಬಹುದೆಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.