ಬೆಳ್ತಂಗಡಿ (ದಕ್ಷಿಣಕನ್ನಡ): ಇಲ್ಲಿನ ಕೊಕ್ಕಡ ಎಂಬಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮಹಿಳೆಯ ಸಾವು ಆಕಸ್ಮಿಕವಲ್ಲ ಕೊಲೆ ಎಂದು ತಿಳಿದು ಬಂದಿದೆ. ಕುಡಿತದ ಅಮಲಿನಲ್ಲಿ ಗಂಡನೇ ಹೆಂಡತಿಯನ್ನು ಹೊಡೆದು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆಯ ವಿವರ : ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಅಗರ್ತ ಎಂಬಲ್ಲಿ ಆ.30ರಂದು ಬೆಳಗ್ಗೆ ಗಣೇಶ್ ಗೌಡ ಎಂಬವರ ಪತ್ನಿ ಮೋಹಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸಹಜವಾಗಿ ಸಾವನ್ನಪ್ಪಿದ್ದರು ಎಂದು ಎಲ್ಲರೂ ನಂಬಿದ್ದರು. ಅಲ್ಲದೇ ಕಳೆದ ಕೆಲವು ದಿನಗಳ ಹಿಂದೆ ಮಹಿಳೆ ಬಿದ್ದು ಗಾಯಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರಬಹುದು ಎಂದು ಸಂಶಯಿಸಲಾಗಿತ್ತು.
ಆದರೆ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತಿದ್ದ ಗಂಡ ಗಣೇಶ ಗೌಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕುಡಿದ ಅಮಲಿನಲ್ಲಿ ಹೆಂಡತಿಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಮರಣೋತ್ತರ ಪರೀಕ್ಷೆಯಲ್ಲೂ ಮೃತದೇಹದಲ್ಲಿ ಗಾಯಗಳಾಗಿದ್ದು ಕಂಡು ಬಂದಿದೆ. ಇವರ 6 ವರ್ಷದ ಮಗನನ್ನು ಮಕ್ಕಳ ಪೋಷಣಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ : ಮಧ್ಯರಾತ್ರಿ ಮನೆಗೆ ಬರುತ್ತಿದ್ದ ಇನ್ಸ್ಟಾಗ್ರಾಂ ಗೆಳೆಯ.. ರೂಮ್ಗೆ ಕರೆದೊಯ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ