ಮಂಗಳೂರು: ಖಾಸಗಿ ಶಾಲೆಗಳಲ್ಲಿ ಶುಲ್ಕ ಕಟ್ಟುವ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಇದನ್ನು ಬಗೆಹರಿಸಲು ಶೀಘ್ರ ಪರಿಹಾರ ಸೂತ್ರ ಕಂಡುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲಾ ಶುಲ್ಕ ಕಟ್ಟುವ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಒಗ್ಗೂಡಿ ಮಾತುಕತೆ ನಡೆಸಿ ಒಂದು ಸೂತ್ರವನ್ನು ಮಾಡಬೇಕಿತ್ತು. ಆದರೆ ಅದನ್ನು ಮಾಡಿಲ್ಲ. ಹಾಗಾಗಿ ಶೀಘ್ರದಲ್ಲಿ ಪರಿಹಾರ ಸೂತ್ರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಶಾಲಾ ಶುಲ್ಕ ಕೊಟ್ಟು ವಿಚಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಾವು ಪೋಷಕರು ಮತ್ತು ಖಾಸಗಿ ಶಾಲಾ ಶಿಕ್ಷಕರ ಹಿತದೃಷ್ಟಿಯಿಂದ ಹೇಳಿದ್ದೆವು. ಬಹಳಷ್ಟು ಪೋಷಕರು ಶುಲ್ಕ ಕಟ್ಟುವ ಮನಸ್ಥಿತಿಯಲ್ಲಿ ಇರಲಿಲ್ಲ. ಇದು ಸರಿಯಾದ ಕ್ರಮವಲ್ಲ. ಹಾಗಾಗಿ ಬಹಳ ಬೇಗ ಪರಿಹಾರ ಸೂತ್ರ ಕಂಡುಕೊಳ್ಳಲಾಗುವುದು. ಈಗಾಗಲೇ ಪೂರ್ತಿ ಶುಲ್ಕ ಕಟ್ಟಿದವರಿಗೆ ಮುಂದಿನ ಸಾಲಿನಲ್ಲಿ ಸಮತೋಲನ ಮಾಡಲಾಗುವುದು ಎಂದು ಹೇಳಿದರು.
ಓದಿ: ಮುರುಘಾಮಠದ ಮಾಜಿ ಸಿಇಒಗೆ ಬ್ಲಾಕ್ ಮೇಲ್ ಕೇಸ್.. ಯುಪಿಯಲ್ಲಿ ಆರೋಪಿ ಬಂಧಿಸಿದ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಶೇ.30 ಪಠ್ಯವನ್ನು ಕಡಿಮೆ ಮಾಡಲಾಗಿದೆ. ಮೇ.15ಕ್ಕೆ ನೀಡಲಾಗಿರುವ ಪಠ್ಯ ಮುಗಿಯಲಿದೆ. ಮಕ್ಕಳ ಮೇಲೆ ಹೊರೆಯಾಗದಂತೆ ಮತ್ತು ಅವರು ಕನಿಷ್ಠ ಕಲಿಕೆ ಮಾಡಬೇಕು ಎಂಬ ನೆಲೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕೇರಳದಿಂದ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳಿಗೆ ಗಡಿಭಾಗದಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಇದೇ ವೇಳೆ ಸ್ಪಷ್ಟಪಡಿಸಿದರು.