ಮಂಗಳೂರು: ಹೈಕಮಾಂಡ್ನಿಂದ ಯಾವ ಸೂಚನೆ ಬರುತ್ತದೆಯೋ ಅದನ್ನು ಸಿಎಂ ಯಡಿಯೂರಪ್ಪ ಅವರು ಖಂಡಿತಾ ಪಾಲಿಸಲಿದ್ದಾರೆ. ಮುಂದೇನಾಗಬೇಕೆಂದು ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಮುಖಂಡರು ಚಿಂತನೆ ನಡೆಸುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ವ್ಯವಸ್ಥಿತವಾಗಿ ಆಡಳಿತ ಸಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಪಕ್ಷದೊಳಗೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ. ಯಡಿಯೂರಪ್ಪ ಅವರು ಕಾರ್ಯಕರ್ತರಾಗಿ ಪಕ್ಷವನ್ನು ತಾಯಿ ಸ್ಥಾನದಲ್ಲಿ ನೋಡಿಕೊಂಡು ಹೈಕಮಾಂಡ್ ಹಾಗೂ ಪಕ್ಷದ ಹಿರಿಯರ ಆದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ ಎಂದು ಬಹಳ ವಿಶ್ವಾಸಾರ್ಹವಾಗಿ ಹೇಳಿದ್ದಾರೆ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಮುಂದಿನ ಸಿಎಂ ಆಗಬೇಕೆಂಬ ಪ್ರಣವಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಭಾವನೆ ವ್ಯಕ್ತಪಡಿಸಲು ಅವಕಾಶವಿದೆ. ಅವರ ಮಾತುಗಳನ್ನು ಗೌರವಿಸಿ. ಸಾಮಾನ್ಯ ಕಾರ್ಯಕರ್ತನಾಗಿರುವ ನಾನು, ನಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸಿರುವ ಪಕ್ಷ, ಪಕ್ಷವನ್ನು ಕಟ್ಟಿ ಬೆಳೆಸಿರುವ ಹಿರಿಯರು, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧ ಎಂದರು.
ಆರು ಬಾರಿ ಲೋಕಸಭಾ ಸದಸ್ಯರಾಗಿ, ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆಸ್ಕರ್ ಫರ್ನಾಂಡಿಸ್ ಅವರು, ದ.ಕ.ಜಿಲ್ಲೆಗೆ ಎಂಆರ್ಪಿಎಲ್ ಸೇರಿದಂತೆ ಬಹುತೇಕ ಸಂಸ್ಥೆಗಳು ಬರಲು ಕಾರಣೀಭೂತರಾಗಿದ್ದವರು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಅಭಿವೃದ್ಧಿ ಪರ ಹೆಚ್ಚು ಗಮನ ಹರಿಸಿದವರು.
ಆದರ್ಶ ಹಾಗೂ ವಿಶ್ವಾಸಾರ್ಹ ರಾಜಕಾರಣಿಗಳಲ್ಲಿ ಆಸ್ಕರ್ ಫರ್ನಾಂಡಿಸ್ ಓರ್ವರು. ಇದೀಗ ಅವರು ಅನಾರೋಗ್ಯದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಮಗೆಲ್ಲ ನೋವು ತಂದಿದೆ. ಬಹುಬೇಗ ಅವರ ಆರೋಗ್ಯ ಚೇತರಿಕೆಯಾಗಿ, ನಮ್ಮ ಜೊತೆ ಹೆಜ್ಜೆಯಿಡುವಂತಹ ಅವಕಾಶ ದೊರಕಲಿ ಎಂದು ಆಶಿಸುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.