ಮಂಗಳೂರು : ಕೊರೊನಾ ಹತೋಟಿಗೆ ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆದೇಶ ಪಾಲಿಸುತ್ತಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲೂ ವಾರ್‌ರೂಂಗಳನ್ನು ತೆರೆಯಲಾಗಿದೆ. ನಿರಂತರವಾಗಿ ಇಲ್ಲಿ ಕಾರ್ಯಚಟುವಟಿಕೆ ಮಾಡುವುದರ ಮೂಲಕ ವಾರ್ ರೂಂ ಯಶಸ್ವಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ವಾರ್ ರೂಂ ಮೂಲಕ ನಿನ್ನೆಯವರೆಗೆ 3,200 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 1,120 ಮನೆಗಳಿಗೆ ಆಹಾರದ ಕಿಟ್ ಪೂರೈಸಲಾಗಿದೆ. 110 ಆ್ಯಂಬುಲೆನ್ಸ್ ಸರ್ವೀಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಲ್ಲದೆ ಈ ಮೂಲಕ ಸುಮಾರು 28 ಮನೆಗಳಿಗೆ ಔಷಧಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. 44 ಇತರೆ ಕಾರ್ಯಗಳನ್ನು ಮಾಡಲಾಗಿದೆ. ಆದ್ದರಿಂದ ನಮ್ಮ ವಾರ್ ರೂಂ (ದೂರವಾಣಿ ಸಂಖ್ಯೆ- 0824-2448888) ನಿರಂತರವಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ. ಬೆಳಗ್ಗಿನಿಂದ ರಾತ್ರಿವರೆಗೆ ನಾನು ವಾರ್ ರೂಂನಲ್ಲೇ ಇದ್ದುಕೊಂಡು ಇಡೀ ಜಿಲ್ಲೆಯನ್ನು ಮಾನಿಟರ್ ಮಾಡುತ್ತಿದ್ದೇನೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಶಾಸಕರು, ಮಹಾನಗರ ಪಾಲಿಕೆಯ ಸದಸ್ಯರು ಅಲ್ಲಿರುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದರು.
ತಲಪಾಡಿ ಗಡಿಭಾಗದಲ್ಲಿ ಅಂತರರಾಜ್ಯದಿಂದ ಬರುವವರನ್ನು ಕಡ್ಡಾಯವಾಗಿ ತಡೆಯಲಾಗಿದೆ. ಇಂದು ನಾನು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಕೇಂದ್ರದಿಂದ ಆಗಲಿ, ಕೇಂದ್ರದ ಯಾವುದೇ ಮಂತ್ರಿಗಳಿಂದಲೂ ಗಡಿ ತೆರೆಯುವಂತೆ ಯಾವುದೇ ಆದೇಶ ಬಂದಿಲ್ಲ. ಸಿಎಂ ಗಡಿಭಾಗದಿಂದ ತಾತ್ಕಾಲಿಕವಾಗಿ ಯಾರನ್ನೂ ಬರದಂತೆ ತಡೆಯುವಂತೆ ಆದೇಶ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಿರೋದರಿಂದ ನಿರಾಶ್ರಿತರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಯಾರಿಗಾದರೂ ಊಟದ ತೊಂದರೆ ಉಂಟಾದಲ್ಲಿ ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಯಾರಿಗಾದರೂ ಆಹಾರಕ್ಕೆ ತೊಂದರೆಯಾದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.