ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಜಯಂತಿ ಮತ್ತು ಸಮಾಲೋಚನಾ ಸಭೆಯು`ನೆಲ-ಜಲ-ಶಿಕ್ಷಣ' ಎಂಬ ಆಶಯದೊಂದಿಗೆ ನಾಳೆ ನೆಹರೂ ನಗರದ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ವಿವೇಕಾನಂದ ಜಯಂತಿ ಮತ್ತು ಸಮಾಲೋಚನಾ ಸಭೆಯ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ ಬಿದಿರೆ ವಿವೇಕಾನಂದ ಜಯಂತಿ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡುವರು. ಸಮಾರೋಪ ಭಾಷಣವನ್ನು ಉಡುಪಿಯ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ನಡೆಸಿಲಿಕೊಡಲಿದ್ದಾರೆ ಎಂದು ಹೇಳಿದರು.
ಈ ಬಾರಿಯ ವಿವೇಕಾನಂದ ಜಯಂತಿಯ ಸಂದರ್ಭದಲ್ಲಿ ವಿಶೇಷ ಕಾರ್ಯ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ 19 ಮತ್ತು ಇತರ ಶಿಶುಮಂದಿರಗಳ ಸುಮಾರು 1100 ಪುಟಾಣಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ `ಶಿಶು ಸಂಗಮ' ಚಿಣ್ಣರ ಸಮ್ಮೇಳನದಲ್ಲಿ ಮಕ್ಕಳಿಗಾಗಿ ಬೆಳಗಿನಿಂದ ಅಪರಾಹ್ನದವರೆಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಸುಮಾರು 80 ಮಂದಿ ಮಾತಾಜಿಯವರು ಅದಕ್ಕಾಗಿಯೇ ಸಿದ್ಧರಾಗಿದ್ದಾರೆ. ಮಕ್ಕಳಿಗೆ ಉಪಹಾರ, ಸಹಭೋಜನದ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತದೆ ಎಂದು ವಿವರಿಸಿದರು.
ಶಿಶುಮಂದಿರದಿಂದ ಆಗಮಿಸುವ ಮಕ್ಕಳ ಪೋಷಕರಿಗೂ ಬೆಳಗ್ಗೆ 11.30ರಿಂದ ಪ್ರತ್ಯೇಕ ಉಪನ್ಯಾಸ, ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮಕ್ಕಳ ಭವಿಷ್ಯ, ಬೆಳೆಯಬೇಕಾದ ರೀತಿ ನೀತಿಗಳ ಕುರಿತು ಸಮಾಲೋಚನೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ವಿವೇಕಾನಂದ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಬೆಳಗ್ಗೆ 11.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿವಿಧ ಗಾನನೃತ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.